ಡಿ.23ಕ್ಕೆ ಚಿಕ್ಕಮಗಳೂರಿಗೆ ರಾಹುಲ್‌ಗಾಂಧಿ?
ಬೆಂಗಳೂರು, ಡಿ.7: ರಾಹುಲ್‌ಗಾಂಧಿ ಚಿಕ್ಕಮಗಳೂರಿಗೆ ಡಿ.23ರಂದು ಭೇಟಿ ನೀಡಲಿದ್ದು ಅವರನ್ನು ಸ್ವಾಗತಿಸಲು ಕೆಪಿಸಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿ.23ರಂದು ಆಯೋಜಿಸಲಾಗಿರುವ ಇಂದಿರಾಗಾಂಧಿ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಹುಲ್‌ಗಾಂಧಿ ಆಗಮಿಸುವ ಸಾಧ್ಯತೆಗಳಿವೆ.
ಎಐಸಿಸಿ ಅಧ್ಯಕ್ಷರಾದ ನಂತರ ರಾಜ್ಯಕ್ಕೆ ನೀಡುವ ಮೊದಲ ಭೇಟಿ ಇದಾಗಬಹುದು. ಈ ಕಾರ್ಯಕ್ರಮವನ್ನು ಅವಿಸ್ಮರಣೀಯ ಮಾಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಘಟಾನುಘಟಿ ಕಾಂಗ್ರೆಸ್ ನಾಯಕರು ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
2018ರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲೆ ರಾಹುಲ್‌ಗಾಂಧಿ ಚಾಲನೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ನಡುವೆ ಹುಬ್ಬಳ್ಳಿ-ಧಾರವಾಡ ಅಥವಾ ದಾವಣಗೆರೆಯಲ್ಲಿ ಅದ್ಧೂರಿ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲು ಕೆಪಿಸಿಸಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಭಿನಂದನಾ ಸಮಾವೇಶ ಆಯೋಜನೆಯ ನೇತೃತ್ವವನ್ನು ಸ್ವತಃ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೆ ವಹಿಸಿಕೊಳ್ಳುವ ಸಾಧ್ಯತೆಗಳಿದ್ದು, ಸುಮಾರು ಐದು ಲಕ್ಷ ಜನರನ್ನು ಸೇರಿಸಿ ರಾಹುಲ್‌ಗಾಂಧಿ ಮೂಲಕ ಚುನಾವಣಾ ರಣಕಹಳೆ ಮೊಳಗಿಸಲು ರಾಜ್ಯ ನಾಯಕರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
86 ಶಾಸಕರಿಗೆ ಟಿಕೆಟ್ ಖಾತ್ರಿ?: ರಾಜ್ಯ ವಿಧಾನಸಭೆಯಲ್ಲಿರುವ 123 ಕಾಂಗ್ರೆಸ್ ಶಾಸಕರ ಪೈಕಿ 86 ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನುಳಿದ 37 ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಜನ ಬೆಂಬಲವನ್ನು ಕಳೆದುಕೊಂಡಿರುವ ಶಾಸಕರ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸವನ್ನು ಕೆಪಿಸಿಸಿ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಎರಡಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಮನವೊಲಿಸಿ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್‌ಗೆ ಮುಖ್ಯಮಂತ್ರಿ ವಹಿಸಿದ್ದಾರೆ ಎಂದು ಎನ್ನಲಾಗಿದೆ.