ಕೇಂದ್ರ ಬೆಳೆಗಾರರ ನೆರವಿಗೆ ಬಂದಿದೆ : ಬೆಳೆಗಾರರ ಒಕ್ಕೂಟ ಸಮರ್ಥನೆ
ಮಡಿಕೇರಿ,ಡಿ.7 :ಕರಿಮೆಣಸಿನ ಆಮದಿನಿಂದ ಸ್ಥಳೀಯ ಬೆಳೆಗಾರರು ಎದುರಿಸುತ್ತಿದ್ದ ಸಂಕಷ್ಟದ ನಿವಾರಣೆಗಾಗಿ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುವ ಕರಿಮೆಣಸಿಗೆ ಪ್ರತಿ ಕೆ.ಜಿ.ಗೆ 500 ರೂ. ಕನಿಷ್ಠ ಆಮದು ಶುಲ್ಕ ಸೇರಿದಂತೆ ಇತರೆ ತೆರಿಗೆಯನ್ನು ವಿಧಿಸುವ ಮೂಲಕ ಬೆಳೆಗಾರರ ನೆರವಿಗೆ ಬಂದಿರುವುದಾಗಿ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ತಿಳಿಸಿದ್ದಾರೆ.
ಕರ್ನಾಟಕ ಬೆಳೆಗಾರರ ಒಕ್ಕೂಟ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಕೊಡಗು ಜಿಲ್ಲಾ ಬೆಲೆಗಾರರ ಒಕ್ಕೂಟದಿಂದ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಿಮೆಣಸು ಆಮದನ್ನು ನಿಯಂತ್ರಿಸಲು ಕೇಂದ್ರ ಕೈಗೊಂಡಿರುವ ಕ್ರಮಗಳಿಂದ ಮುಂದಿನ 2 ರಿಂದ 3 ತಿಂಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗುವ ಕರಿಮೆಣಸಿನ ಧಾರಣೆ ಹೆಚ್ಚುವ ವಿಶ್ವಾಸವಿದೆ ಎಂದರು.
ಪ್ರಸಕ್ತ ಸಾಲಿನ ನವೆಂಬರ್‍ನಲ್ಲಿ ಭಾರತಕ್ಕೆ ವಿದೇಶಗಳಿಂದ ಹೆಚ್ಚಳವಾದ ಕರಿಮೆಣಸು ಆಮದಿನಿಂದಾಗಿ ಸ್ಥಳೀಯವಾಗಿ ಬೆಳೆದ ಕರಿಮೆಣಸಿಗೆ ಬೆಲೆ ಮತ್ತು ಬೇಡಿಕೆ ಕುಸಿತವನ್ನು ಕಂಡಿತ್ತು. ಈ ನಿಟ್ಟಿನಲ್ಲಿ ದಕ್ಷಿಣ ಭಾರತ 14 ಬೆಳೆಗಾರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿ ಸಮನ್ವಯ ಸಮಿತಿಯನ್ನು ರಚಿಸಿ, ಆ ಸಮಿತಿ ಕಳೆದ ವಾರ ಕೇಂದ್ರದ ವಾಣಿಜ್ಯ ಸಚಿವ ಸುರೇಶ್ ಪ್ರಭು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಕೇಂದ್ರ ತೋಟಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಕರಿಮೆಣಸು ಆಮದಿಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಪಂದಿಸಿದ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು, ಬೆಳೆಗಾರರ ಸಮನ್ವಯ ಸಮಿತಿಯ ಸಲಹೆಯನ್ನು ಸ್ವೀಕರಿಸಿ, ಆಮದಾಗುವ ಕರಿಮೆಣಸಿಗೆ ಕೆ.ಜಿ.ಗೆ 500 ರೂ. ಗಳಂತೆ ಶುಲ್ಕ ವಿಧಿಸಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ಕರಿಮೆಣಸು ಆಮದಿಗೆ ಕಡಿವಾಣ ಬೀಳಲಿದೆ. ಕೇಂದ್ರದ ಕ್ರಮವನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಆಮದಾದ ಕರಿಮೆಣಸಿಗೆ ಭಾರತದಲ್ಲಿ ಡಂಪಿಂಗ್ ಶುಲ್ಕ ವಿಧಿಸಬೇಕು, ಈಗಿರುವ ಶೇ. 64 ರಿಂದ ಶೇ. 108 ಕ್ಕೆ ಆಮದು ಶುಲ್ಕವನ್ನು ಹೆಚ್ಚಿಸಬೇಕು, ಭಾರತದ ನಿರ್ದಿಷ್ಟ ಎರಡು ಬಂದರುಗಳ ಮೂಲಕವಷ್ಟೇ ಕರಿಮೆಣಸು ಕೂಡ ಬರುವಂತಾಗಬೇಕು, ಆಮದಾದ ಕರಿಮೆಣಸು ಗುಣಮಟ್ಟದ ದೃಢೀಕರಣಕ್ಕೆ ಸರ್ಕಾರ ಮುಂದಾಗಬೇಕು ಎನ್ನುವುದು ಬೆಳೆಗಾರರ ಸಮನ್ವಯ ಸಮಿತಿಯ ಬೇಡಿಕೆಗಳಾಗಿದ್ದು, ಈ ಬೇಡಿಕೆಗಳ ಈಡೇರಿಕೆಗೆ ಬೆಳೆಗಾರರ ಸಮನ್ವಯ ಸಮಿತಿ ಹೋರಾಟ ಮುಂದುವರೆಸಲಿದೆಯೆಂದು ತಿಳಿಸಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‍ನ ಪ್ರಮುಖರಾದ ತೇಲಪಂಡ ಪ್ರದೀಪ್ ಪೂವಯ್ಯ ಮಾತನಾಡಿ, ಕೇಂದ್ರದ ವಾಣಿಜ್ಯ ಸಚಿವಾಲಯ 500 ರೂ. ಕನಿಷ್ಠ ಆಮದು ಶುಲ್ಕ ವಿಧಿಸಿದೆ. ಇದರಿಂದ ವಿಯೆಟ್ನಾಂನಿಂದ ಆಮದಾಗುತ್ತಿದ್ದ ಕರಿಮೆಣಸಿನ ದರ ಕನಿಷ್ಠ ಆಮದು ಶುಲ್ಕ ಮತ್ತು ಇತರೆ ತೆರಿಗೆಗಳನ್ನು ಒಳಗೊಂಡು ಪ್ರತಿ ಕೆ.ಜಿ.ಗೆ 550 ರೂ.ಗಳಿಂದ 600 ರೂ.ಗಳಷ್ಟಾಗುವುದರಿಂದ ಆಮದಿನ ಮೇಲೆ ಕಡಿವಾಣ ಬೀಳಬಹುದೆಂದರು.
ಭಾರತದಲ್ಲಿ 60 ಸಾವಿರ ಟನ್ ಕರಿಮೆಣಸು ಉತ್ಪಾದನೆಯಾಗುತ್ತಿದ್ದು, ಆಂತರಿಕ ಮಾರುಕಟ್ಟೆಯ ಬೇಡಿಕೆ 65 ಸಾವಿರದಷ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಕರಿಮೆಣಸಿನ ಧಾರಣೆ ಹೆಚ್ಚುವ ಅವಕಾಶವಿದೆ. ಆದರೆ, ಈಗಾಗಲೆ ಆಮದಾಗಿರುವ ಹೊರ ದೇಶದ ಕಳಪೆ ಗುಣಮಟ್ಟದ ಕರಿಮೆಣಸು ವಿಲೇವಾರಿಯಾಗುವವರೆಗೆ ಧಾರಣೆ ಹೆಚ್ಚಳಕ್ಕೆ ಕಾಯಬೇಕಾಗಬಹುದೆಂದರು.
ಬೆಳೆಗಾರರ ಸಂಘಟನೆಯ ಮನವಿ ಮತ್ತು ಸಲಹೆ ಸ್ವೀಕರಿಸಿದ ಕೇಂದ್ರ ಸರ್ಕಾರ, ವಾಣಿಜ್ಯ ಸಚಿವರಾದ ಸುರೇಶ್ ಪ್ರಭು, ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಎಂಎಲ್‍ಸಿ ಸುನಿಲ್ ಸಬ್ರಮಣಿ, ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರುಗಳಿಗೆ ಎಲ್ಲಾ ಸಂಘಟನೆಗಳ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರಾದ ನಂದ ಬೆಳ್ಯಪ್ಪ, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ ನಂದಿನೆರವಂಡ ದಿನೇಶ್ ಹಾಗೂ ಸಿ.ಪಿ.ಎ ಅಧ್ಯಕ್ಷರಾದ ಡಾ. ಡಿ.ಯಂ. ಬೋಪಯ್ಯ ಉಪಸ್ಥಿತರಿದ್ದರು.