ಹೋರಾಟದಲ್ಲಿ ಪಾಲ್ಗೊಳ್ಳದಂತೆ ಬಿಜೆಪಿಗರಿಂದ ತಡೆ: ಬಿಜೆಪಿ ಶಾಸಕ ಉಮೇಶ್ ಕತ್ತಿ ಆರೋಪ

Update: 2017-12-08 12:39 GMT

ಬೆಳಗಾವಿ, ಡಿ. 7: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಆಗ್ರಹಿಸಿ ನಡೆದ ಹೋರಾಟದಲ್ಲಿ ಪಾಲ್ಗೊಳ್ಳದಂತೆ ತನ್ನನ್ನು ಬಿಜೆಪಿ ನಾಯಕರು ತಡೆದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಉಮೇಶ್ ಕತ್ತಿ ಆರೋಪಿಸಿದ್ದಾರೆ

ಶುಕ್ರವಾರ ಜಿಲ್ಲೆಯ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಲಿಂಗಾಯತ ವೀರಶೈವ ಸಮುದಾಯಕ್ಕೆ ಸೇರಿದವನು. ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಹೋರಾಟದಲ್ಲಿ ಭಾಗವಹಿಸದಂತೆ ಬಿಜೆಪಿ ಮುಖಂಡರು ತನಗೆ ತಡೆಯೊಡ್ಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

"ನಾನು ಹುಟ್ಟಿನಿಂದಲೂ ಲಿಂಗಾಯತ, ಸಾಯುವಾಗಲೂ ಲಿಂಗಾಯತ. ಬಿಜೆಪಿ ಮುಖಂಡರು ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಹೋರಾಟದಲ್ಲಿ ಪಾಲ್ಗೊಳ್ಳದಂತೆ ಆದೇಶ ನೀಡಿದ್ದರಿಂದ ಆ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ" ಎಂದರು.

ಸ್ಪಷ್ಟನೆ: ಬಿಜೆಪಿ ನಾಯಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಮಾಧ್ಯಮಗಳಲ್ಲಿ ಬಿತ್ತರಗೊಂಡ ಕೂಡಲೇ ತಮ್ಮ ಹೇಳಿಕೆ ಬದಲಿಸಿದ ಉಮೇಶ್ ಕತ್ತಿ, "ನಮ್ಮ ಮನೆಗೆ ತೆಂಗಿನಕಾಯಿ ಒಯ್ಯಲು ಬಂದಿದ್ದ ಶಿಷ್ಯನಿಗೆ ಬೈದಿದ್ದೆ. ಅದನ್ನೆ ಮಾಧ್ಯಮ ಪ್ರತಿನಿಧಿಗಳು ತಪ್ಪಾಗಿ ಭಾವಿಸಿವೆ. ತಾನು ಯಾವುದೇ ಬಿಜೆಪಿ ಮುಖಂಡರನ್ನು ನಿಂದಿಸಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ಅದನ್ನು ಒಡೆಯಲು ಕೆಲವರು ಹೊರಟಿದ್ದಾರೆ. ಹೀಗಾಗಿ ಹೋರಾಟಗಳಲ್ಲಿ ಭಾಗವಹಿಸಿಲ್ಲ. ನಾನು ಮುಸ್ಲಿಂ ಅಲ್ಲ, ಕ್ರೈಸ್ತ ಅಲ್ಲ, ಜೈನನೂ ಅಲ್ಲ. ಹಿಂದೂಧರ್ಮಕ್ಕೆ ಸೇರಿದವನಾಗಿದ್ದೇನೆ ಎಂದು ಉಮೇಶ್ ಕತ್ತಿ ಹೇಳಿದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸ್ನೇಹಿತರು. ಅವರನ್ನು ಭೇಟಿಯಾಗಿದ್ದು ನಿಜ. ಎಮ್ಮೆ, ಎತ್ತು ಸತ್ತರೆ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದೆ. ಅದರ ಹೊರತು, ಬಿಜೆಪಿ ಬಿಡುವ ಅಥವಾ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೃತ್ತಿ ಹೊಂದುವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News