ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಸಿಎಂ ಸಿದ್ದರಾಮಯ್ಯ

Update: 2017-12-08 13:48 GMT

ಮೈಸೂರು, ಡಿ.8: "ಖಾಸಗಿ ವಾಹಿನಿ, ಸಂಸ್ಥೆಗಳು ಮಾಡಿರುವ ಸಮೀಕ್ಷೆಯನ್ನು ನಾನು ಒಪ್ಪುವುದಿಲ್ಲ. ಯಾರು ಏನೇ ಹೇಳಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ" ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶುಕ್ರವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

"ಖಾಸಗಿ ವಾಹಿನಿ, ಸಂಸ್ಥೆಗಳು ಮಾಡಿರುವ ಸಮೀಕ್ಷೆಗೂ ಮುನ್ನ ನಾವು ಕೂಡ ಸಮೀಕ್ಷೆ ಮಾಡಿಸಿದ್ದೇವೆ. ನಮಗೆ ಸ್ಪಷ್ಟಬಹುಮತ ದೊರೆಯಲಿದೆ. ಎರಡನೆ ಬಾರಿ ಕೂಡ ಸಮೀಕ್ಷೆ ಮಾಡಿಸಲಾಗುತ್ತಿದೆ. ಬಹುಃಶ ಜನವರಿ ಕೊನೆ ವಾರದಲ್ಲಿ ಅದರ ಫಲಿತಾಂಶ ತಿಳಿಯಲಿದೆ" ಎಂದು ಅವರು ಹೇಳಿದರು.

ಬಿಎಸ್ ವೈಗೆ ಮುಖ್ಯಮಂತ್ರಿ ಸ್ಥಾನ ಸಿಗದು

ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಟುಮೂಟೆ ಕಟ್ಟಿಕೊಂಡು ಮೈಸೂರಿಗೆ ಹೋಗುತ್ತಾರೆ ಎಂದಿರುವ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಆದರೆ ಅದು ಸಾಧ್ಯವಾಗಲಾರದು. ಯಾವ ಕಾರಣಕ್ಕೂ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

ಬಿಜೆಪಿಯವರಿಗೆ ಎರಡೆರಡು ನಾಲಗೆ

ಬಿಜೆಪಿಯವರಿಗೆ ಎರಡೆರಡು ನಾಲಗೆ ಇದೆ. ಯಡಿಯೂರಪ್ಪ ಒಮ್ಮೆ ಟಿಪ್ಪು ವೇಷ ಧರಿಸಿ ಖಡ್ಗ ಝಳಪಿಸುತ್ತಾ ಫೋಸು ಕೊಡುತ್ತಾರೆ. ಜಗದೀಶ್ ಶೆಟ್ಟರ್ ಶೇಖ್ ಆಲಿ ಪುಸ್ತಕದಲ್ಲಿ ಟಿಪ್ಪು ವೀರಸೇನಾನಿ ಎಂದು ಉಲ್ಲೇಖಿಸುತ್ತಾರೆ. ಆದರೆ ಈಗ ಇವರಿಬ್ಬರೂ ಟಿಪ್ಪು ಜಯಂತಿ ವಿರೋಧಿಸುತ್ತಾರೆ ಎಂದರು.

ಬಿಜೆಪಿಯೇ ಕಾರಣ

ಹುಣಸೂರಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಬಿಜೆಪಿಯವರೇ ಕಾರಣ. ಹನುಮ ಜಯಂತಿ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡಿದ ಕಡೆ ಮೆರವಣಿಗೆ ಮಾಡಬೇಕಿತ್ತು. ಅದು ಬಿಟ್ಟು ತಮಗೆ ಇಷ್ಟ ಬಂದ ಕಡೆ ಮೆರವಣಿಗೆ ಮಾಡಬೇಕು ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಮನಸ್ಥಿತಿ ತಿಳಿಯುತ್ತದೆ

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಭಾಗ್ಯಗಳನ್ನು ನಿಲ್ಲಿಸುವುದಾಗಿ ಹೇಳಿರುವ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾವು ರಾಜ್ಯದ ಜನರ ಹಿತದೃಷ್ಟಿಯಿಂದ ಅನ್ನಭಾಗ್ಯ, ಕೃಷಿಭಾಗ್ಯ, ವಿದ್ಯಾರ್ಥಿಗಳಿಗೆ ಹಾಲು, ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಸಬ್ಸಿಡಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇಂತಹ ಮಹತ್ತರ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಂಸದ ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪ ಅಮರ್‌ನಾಥ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಮಲ್ಲಿಗೆ ವೀರೇಶ್, ಸಿದ್ಧರಾಜು, ಎಚ್.ಎ. ವೆಂಕಟೇಶ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಎಂ. ಸತ್ಯನಾರಾಯಣ, ಹೆಜ್ಜಿಗೆ ಇಂಧನ್ ಬಾಬು, ಕರಳಪುರ ಸ್ವಾಮಿ, ಮೈಸೂರು ಬಸವಣ್ಣ, ಮುಡಾ ಸದಸ್ಯರಾದ ಶಿವಮಲ್ಲು, ಸೋಮಶೇಖರ್ ಸೇರಿದಂತೆ ಹಲವರು ಮುಖ್ಯಮಂತ್ರಿ ಜೊತೆಯಲ್ಲಿದ್ದರು.

  ಇದು ಕಾಂಗ್ರೆಸ್ ಸಂಸ್ಕೃತಿ ಸಿದ್ದರಾಮಯ್ಯ ಕುರಿತ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ‘ಪಾಪದ ಪಿಂಡ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಹೆಗಡೆ ಅವರ ನಾಲಿಗೆಯೇ ಅವರ ಸಂಸ್ಕೃತಿ ತೋರಿಸುತ್ತದೆ. ನಾವು ಕೂಡ ಗ್ರಾಮೀಣ ಪ್ರದೇಶದಿಂದ ಬಂದವರು. ಹೆಗಡೆ ಅವರಿಗಿಂತ ಕೆಟ್ಟ ಪದ ಉಪಯೋಗಿಸಲು ನಮಗೂ ಬರುತ್ತದೆ. ಆದರೆ ಅದು ನಮ್ಮ ಸಂಸ್ಕತಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಶಂಕರ್ ಅಯ್ಯರ್ ನೀಚ ಎಂದು ಕರೆದಿದ್ದಕ್ಕೆ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಏನು ಎಂಬುದು ತಿಳಿಯುತ್ತದೆ ಎಂದರು.

ಕಾನೂನು ಉಲ್ಲಂಘನೆ ಮಾಡಬಹುದೇ ?

 ಪ್ರತಾಪ್ ಸಿಂಹ ಸಂಸದನಾದ ಮಾತ್ರಕ್ಕೆ ಕಾನೂನು ಉಲ್ಲಂಘನೆ ಮಾಡಬಹುದೇ? ಅವರು ಸರಕಾರಿ ವಾಹನವನ್ನು ತಾನೇ ಚಾಲನೆ ಮಾಡಿಕೊಂಡು ಬಂದು ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ತಮ್ಮ ದರ್ಪ ತೋರಿಸುವುದು ಎಷ್ಟು ಸರಿ? ಸಾಮಾನ್ಯರಿಗೊಂದು ಕಾನೂನು ಸಂಸದರಿಗೊಂದು ಕಾನೂನು ಇದೆಯೇ ? ತಪ್ಪೆಸಗಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News