ಕಾಡಾನೆಗಳ ದಾಳಿಗೆ ಓರ್ವ ಬಲಿ: ಇಬ್ಬರಿಗೆ ಗಾಯ
ಚನ್ನಗಿರಿ, ಡಿ. 8: ತಾಲೂಕಿನ ಹಲವೆಡೆ ಬೆಳ್ಳಂಬೆಳಗ್ಗೆ ಮೂರು ಕಾಡಾನೆಗಳ ದಾಳಿ ನಡೆಸಿದ್ದು, ಆನೆ ಉಪಟಳಕ್ಕೆ ಒರ್ವ ಬಲಿಯಾಗಿದ್ದು, ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ತಾಲೂಕಿನ ಅಶೋಕನಗರ ಕ್ಯಾಂಪ್‍ನಲ್ಲಿ ದಿಢೀರ್ ಕಾಣಿಸಿಕೊಂಡ ಕಾಡಾನೆಗಳು ಬೈಕ್ ಸವಾರ ಸತೀಶ್ (34) ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿವೆ.
ಗಂಭೀರವಾಗಿ ಗಾಯಗೊಂಡ ಸತೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಪಕ್ಕದ ತ್ಯಾವಣಿಗೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಆನೆಗಳು ಮೆಕ್ಕೆಜೋಳ ಮತ್ತು ಜೋಳ ಬೆಳೆಗೆ ಹಾನಿ ಮಾಡಿ ಹುಲ್ಲು ಕೊಯ್ಯುತ್ತಿದ್ದ ಗಣೇಶಪ್ಪ (40) ಎಂಬುವರ ಮೇಲೆ ದಾಳಿ ಮಾಡಿವೆ. ಆನೆಗಳಿಂದ ತಪ್ಪಿಸಿಕೊಂಡ ಗಣೇಶ್ ಅನಾಹುತದಿಂದ ಪಾರಾಗಿದ್ದಾರೆ.
ನಂತರ ಒಂದು ಕಾಡಾನೆ ಕೆಂಗಾಪುರ ಮಾರ್ಗದಲ್ಲಿ ಸಾಗಿದರೆ ಇನ್ನೊಂದು ಕಾಡಾನೆ ಸೂಳೆಕೆರೆ ಮಾರ್ಗದಿಂದ ಹೊಸನಗರದ ಗ್ರಾಮದ ಹೊರವಲಯದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈಶ್ವರ್ ನಾಯ್ಕ್ (55) ಎಂಬುವವರ ಮೇಲೆ ದಾಳಿ ಮಾಡಿದೆ. ದಾಳಿಯಿಂದ ಈಶ್ವರ್ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈತ ತಾಲೂಕಿನ ಹೊಸನಗರ ಗ್ರಾಮದ ನಿವಾಸಿ ಎನ್ನಲಾಗಿದೆ.
ಆನೆಗಳು ನಿನ್ನೆ ಚಿತ್ರದುರ್ಗದಲ್ಲಿ ಕಾಣಿಸಿಕೊಂಡು ಇಂದು ತಾಲೂಕಿನ ಹಲವು ಗ್ರಾಮಗಳ ಸುತ್ತಲೂ ಓಡಾಡುತ್ತಾ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ ಸಾರ್ವಜನಿಕರನ್ನು ಭಯಭೀತರನ್ನಾಗಿಸಿವೆ. ಸ್ಥಳಕ್ಕೆ ಪೆÇಲೀಸರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆನೆಗಳ ಸೆರೆಗೆ ತಂತ್ರ ರೂಪಿಸುತ್ತಿದ್ದಾರೆ.