ಬಹುಮತ ಬರದಿದ್ದರೆ ವಿಪಕ್ಷ ಹೊಣೆ ನಿರ್ವಹಣೆ ಹೊರತು ಹೊಂದಾಣಿಕೆ ಇಲ್ಲ: ದೇವೇಗೌಡ

Update: 2017-12-08 16:26 GMT

ಚಿಕ್ಕಮಗಳೂರು, ಡಿ.8: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ಬಹುಮತ ಬಂದರೆ ಸರ್ಕಾರ ರಚಿಸಲಾಗುವುದು. ಇಲ್ಲದಿದ್ದರೆ ವಿಪಕ್ಷ ಹೊಣೆ ನಿರ್ವಹಣೆ ಮಾಡಲಾಗುವುದೇ ಹೊರತು ಹೊಂದಾಣಿಕೆಯ ಪ್ರಶ್ನೆಯೇ ಇಲ್ಲವೆಂದು ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

  ಈ ಹಿಂದೆ ಕಾಂಗ್ರೆಸ್ ಪಕ್ಷದ ಧರಂಸಿಂಗ್ ಮುಖ್ಯಮಂತ್ರಿಯಾಗಲು ಬೆಂಬಲ ನೀಡಲಾಗಿತ್ತು. ತಮ್ಮ ಮಗ ಬಿಜೆಪಿಗೂ ಸಹಕಾರ ನೀಡಿದ್ದರು. ಅವರಿಬ್ಬರಿಗೆ ಸಹಕಾರ ನೀಡಿರುವುದು ಸಾಕಾಗಿದೆ ಎಂದರು. ಜೆಡಿಎಸ್‍ಗೆ ಬಹುಮತ ದೊರೆತರೆ ದಲಿತರಿಗೆ ಉಪಮುಖ್ಯ ಮಂತ್ರಿಸ್ಥಾನ ನೀಡುವ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೌಡರು ಬಹುಮತ ಬಂದ ನಂತರ ಯಾರಿಗೆ ಯಾವ ಸ್ಥಾನ ಎಂಬುದರ ಬಗ್ಗೆ ನಿರ್ಧಾರವಾಗುತ್ತದೆ ಎಂದರು.

ತಾವು ಅನೇಕ ಮಂದಿ ಹಿಂದುಳಿದ, ದಲಿತ ಮುಖಂಡರಿಗೆ ಅಧಿಕಾರ ನೀಡಿರುವುದಾಗಿ ತಿಳಿಸಿದ ಅವರು ಸಿದ್ದರಾಮಯ್ಯ, ಪಿಜಿಆರ್ ಸಿಂಧ್ಯಾ, ತಿಪ್ಪೇಸ್ವಾಮಿ ಮುಂತಾದ ಹಿಂದುಳಿದವರೊಂದಿಗೆ ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಎಂಟು ಮಂದಿಗೆ ತಮ್ಮ ಸಂಪುಟ ದಲ್ಲಿ ಅವಕಾಶ ಕಲ್ಪಿಸಿದ್ದು, ಓರ್ವ ಒಕ್ಕಲಿಗರಿಗೆ ಮಾತ್ರ ಸಚಿವ ಹುದ್ದೆ ನೀಡಲಾಗಿತ್ತು ಎಂದರು.

ಎರಡು ರಾಷ್ಟ್ರೀಯ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾವೇರಿ, ಮಹಾಧಾಯಿ ಸಮಸ್ಯೆಗೆ ಯಾವ ಪರಿಹಾರ ದೊರೆಯಿತು. ಪಾರ್ಲಿಮೆಂಟ್‍ನಲ್ಲಿ ಯುಪಿಎ ಸರ್ಕಾರವಿದ್ದಾಗ ತಾವು ನೀರಿಗಾಗಿ ಕಣ್ಣೀರು ಹಾಕಿದಾಗ ಕಾಂಗ್ರೆಸ್, ಬಿಜೆಪಿ ನೆರವಿಗೆ ಬರಲಿಲ್ಲ. ಬಿಜೆಪಿಗೆ ಮನವಿ ಮಾಡಿದಾಗ ಮುಂದೆ ಜಯಲಲಿತಾ ಅವರಿಂದ ರಾಜಕೀಯ ಲಾಭವಾಗಬಹುದು ಎಂದು ತಮ್ಮ ರಾಜ್ಯದ ಪರ ಬರಲಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷದ ಅಗತ್ಯದ ಬಗ್ಗೆ ರಾಜ್ಯದ ಜನತೆ ತೀರ್ಮಾನಿಸಬೇಕಾಗಿದೆ ಎಂದರು.

ತೆಂಗು ಅಡಿಕೆ ಬೆಳೆಗಾರರು ಅನೇಕ ಕಾರಣಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಸೆಳೆಯಲು ದಿಲ್ಲಿಗೆ ರೈತರನ್ನು ಕರೆದುಕೊಂಡು ಹೋಗುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕಾಂಗ್ರೆಸ್ ಸದಸ್ಯರೋರ್ವರು ಕೂಡ ಬೆಂಬಲ ನೀಡಿದ್ದಾರೆ. ತಮ್ಮ ಪಕ್ಷದ ಶಾಸಕರು ಆಸಕ್ತರಾಗಿ ದ್ದಾರೆ. ಈ ನಡುವೆ ದತ್ತ ರೈತರ ಪರವಾಗಿ ಮನವಿ ಸಲ್ಲಿಸುವ ಕಾರ್ಯ ಕ್ರಮ ಆಯೋಜಿಸಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರವೂ ತೆಂಗು ಮತ್ತು ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲಿಲ್ಲ. ಈಗಿನ ಎನ್‍ಡಿಎ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಶಾಸಕ ಬಿ.ಬಿ. ನಿಂಗಯ್ಯ, ಜೆಡಿಎಸ್ ರಾಜ್ಯ ಉಪಾ ಧ್ಯಕ್ಷ ಎಚ್.ಎಚ್.ದೇವರಾಜ್, ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News