×
Ad

ಸಿಎಂ ಸಿದ್ದರಾಮಯ್ಯ ಡಾಕ್ಟರ್ ಯಾಕಾಗಿಲ್ಲ ?... ಇಲ್ಲಿದೆ ಕಾರಣ

Update: 2017-12-08 22:20 IST

ಮೈಸೂರು, ಡಿ. 8: ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮಗಳಿದ್ದು, ಕನ್ನಡದಲ್ಲಿ ಓದಿದ್ದ ನಾನೇ ಉಭಯ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳಿಗಿಂತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಮೊದಲ ಸ್ಥಾನ(ನಂ.1) ಪಡೆದಿದ್ದೆ. ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ಇಂಗ್ಲಿಷ್ ಮಾಧ್ಯಮವಾಗಿದ್ದರಿಂದ ಎರಡನೇ ಸ್ಥಾನಕ್ಕೆ ಜಾರಿದೆ. ಅದೊಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಇಲ್ಲದಿದ್ದರೆ ನಾನು ಹೇಗೆ ಮುಖ್ಯಮಂತ್ರಿಯಾಗುತ್ತಿದ್ದೆ?

ನಗರದ ಗೋಕುಲಂ ಮೂರನೇ ಹಂತದಲ್ಲಿರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವದ ಅಂಗವಾಗಿ ಸಂಘದ ಸಂಸ್ಥಾಪಕ ಕಾರ್ಯದರ್ಶಿ, ಮಾಜಿ ಸಚಿವ ಕೆ.ಪುಟ್ಟಸ್ವಾಮಿಯವರ ಪ್ರತಿಮೆ ಅನಾವರಣ ಮತ್ತು ಉದ್ದೇಶಿತ ಕಾಲೇಜು ವಿಸ್ತರಣ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ, ಸ್ಥಾಪಕ ಸದಸ್ಯರುಗಳ ಭಾವಚಿತ್ರ ಅನಾವರಣ ಹಿಂದಿನ ಗೌರವ  ಅಧ್ಯಕ್ಷರ ಸ್ಮರಣಾರ್ಥ ಸಭಾಂಗಣಗಳಿಗೆ ನಾಮಕರಣ ಫಲಕ ಅನಾವರಣಗೊಳಿಸಿ, ``ವಿಧಾನ ಮಂಡಲದಲ್ಲಿ ಕೆ.ಪುಟ್ಟಸ್ವಾಮಿಯವರು'' ಗ್ರಂಥ ಬಿಡುಗಡೆ ಮಾಡಿದ ನಂತರ ಅವರು, ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ತಾವು ವ್ಯಾಸಂಗ ಮಾಡಿದ ದಿನಗಳನ್ನು ಮೇಲಿನಂತೆ ಮೆಲುಕು ಮಾಡಿದರು.

1961ರಿಂದ 1964ರವರೆಗೆ ವಿದ್ಯಾವರ್ಧಕ ಪ್ರೌಢಶಾಲೆಯಲ್ಲೇ ಓದಿದೆ. ಹತ್ತನೇ ತರಗತಿಯಲ್ಲಿ ಎರಡು ಸೆಕ್ಷನ್ ಇದ್ದು, ಒಂದು ಕನ್ನಡ ಮಾಧ್ಯಮ, ಇನ್ನೊಂದು ಇಂಗ್ಲಿಷ್ ಮಾಧ್ಯಮ. ನಾನು ಕನ್ನಡ ಮಾಧ್ಯಮದಲ್ಲೇ ಓದಿದರೂ ಇಂಗ್ಲಿಷ್ ಮಾಧ್ಯಮದವರನ್ನೂ ಮೀರಿಸಿ ಮೊದಲ ಸ್ಥಾನದಲ್ಲೇ ಉತ್ತೀರ್ಣನಾಗಿದ್ದೆ ಎಂದು ಸ್ಮರಿಸಿದರು.

ಮೆಡಿಕಲ್ ಸೀಟು ಸಿಗದಿದ್ದುದೇ ಒಳ್ಳೆಯದಾಯಿತು! ಹಾಗಾಗಿಯೇ ಆ ಶಾಲೆಯ ಬಗ್ಗೆ ನನಗೆ ಗೌರವ. ಅಲ್ಲದೆ, ನಾನು ಈ ಶಾಲೆಯಲ್ಲಿ ಓದುತ್ತಿದ್ದಾಗ ಮುಖ್ಯ ಶಿಕ್ಷಕರಾಗಿದ್ದ ನರಸಿಂಹಮೂರ್ತಿ ಅವರ ನಂತರ ರಾಜಗೋಪಾಲ್, ಶಿಕ್ಷಕರಾದ ಪಾಪಣ್ಣ, ಎಂ.ವಿ.ಗೋಪಾಲಕೃಷ್ಣ, ಕೆ.ಆರ್.ಶಂಕರ್ ಮುಂತಾದವರು ಅತ್ಯುತ್ತಮವಾಗಿ ಪಾಠ ಮಾಡುತ್ತಿದ್ದರು. ನಮ್ಮಪ್ಪನಿಗೆ ನನ್ನನ್ನು ಡಾಕ್ಟರ್ ಮಾಡಬೇಕೆಂಬ ಹುಚ್ಚು. ಅದಕ್ಕೇ ನನ್ನನ್ನು ಯುವರಾಜ ಕಾಲೇಜಿನಲ್ಲಿ ವಿಜ್ಞಾನ ಓದಲು ಸೇರಿಸಿದರು. ಎರಡನೇ ದರ್ಜೆಯಲ್ಲಿ ಪಿಯುಸಿ ಪಾಸ್ ಆಗಿದ್ದರಿಂದ ವೈದ್ಯಕೀಯ ಕಾಲೇಜು ಸೇರಲಾಗಲಿಲ್ಲ. ಆಗ ಸಚಿವರಾಗಿದ್ದ ಕೆ.ಪುಟ್ಟಸ್ವಾಮಿ ಅವರನ್ನು, ಶಾಸಕರಾಗಿದ್ದ ಎಂ.ರಾಜಶೇಖರ ಮೂರ್ತಿ ಅವರೊಡನೆ ಭೇಟಿಯಾಗಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸಲು ಕೇಳಿದ್ದೆ. ಅದು ಸಾಧ್ಯವಿಲ್ಲ ಎಂದಿದ್ದರು. ಅದರಿಂದ ಒಳ್ಳೆಯದೇ ಆಯಿತು. ಇಲ್ಲದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದರು.

ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷರಾಗಿದ್ದ ಪಿ.ಎಂ.ಚಿಕ್ಕಬೋರಯ್ಯ ಅವರ ಬಳಿ ನಾನು ವಕೀಲಿಕೆ ಕಲಿಯುತ್ತಿದ್ದಾಗ, ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೂಡ 3 ವರ್ಷ ಕೆಲಸ ಮಾಡಿದ್ದೆ. 1983ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ನಂತರ ಕೆಲಸ ಬಿಟ್ಟೆ ಎಂದು ಸಿದ್ದರಾಮಯ್ಯ ಹೇಳಿದರು.

ವಿದ್ಯಾವರ್ಧಕ ಸಂಘದ ಕೆ.ಪುಟ್ಟಸ್ವಾಮಿ ಅವರು ನಾಡುಕಂಡ ಅಪರೂಪದ ರಾಜಕಾರಣಿಯಾಗಿದ್ದರು ಎಂದರೆ ಅತಿಶಯೋಕ್ತಿಯಾಗದು. ಅವರು ಬಹಳ ಒಳ್ಳೆಯ ಸಂಸದೀಯಪಟುವಾಗಿದ್ದರು. ಅರ್ಥಪೂರ್ಣ, ಪ್ರತಿಭಾಪೂರ್ಣ ಭಾಷಣ ಕಲೆ ಅವರಿಗಿ ಸಿದ್ಧಿಸಿತ್ತು. ಮುಖ್ಯವಾಗಿ ಅವರು ಪ್ರಾಮಾಣಿಕರಾಗಿದ್ದರು. ಇವತ್ತಿನ ತಲೆಮಾರಿನ ರಾಜಕಾರಣಿಗಳಿಗೆ ಅವರು ಆದರ್ಶಪ್ರಾಯರಾಗಿದ್ದರು ಎಂದು ಅವರು ತಿಳಿಸಿದರು.

ಶಿಕ್ಷಣ ಮಾನವೀಯ ಜ್ಞಾನ ಆಗಬೇಕು: ಶಿಕ್ಷಣ ಪಡೆಯುವುದೆಂದರೆ ಬರೀ ಓದು, ಬರೆಹ ಅಲ್ಲ. ಅದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಜ್ಞಾನ ಆಗಬೇಕು. ಆಗ ಮಾತ್ರ ಸಮಾಜಕ್ಕೆ, ನಾಡಿಗೆ ಆಸ್ತಿ ಆಗುತ್ತೇವೆ ಎಂಬುದಾಗಿ ವಿನಮ್ರವಾಗಿ ತಿಳಿಸಬಯಸುತ್ತೇನೆ ಎಂದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಮಹಾಪೌರ ಎಂ.ಜೆ.ರವಿಕುಮಾರ್, ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಮಾಜಿ ಶಾಸಕ ಎಂ.ಸತ್ಯನಾರಾಯಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಿ.ಮಾದೇಗೌಡ, ಕೆ.ಪಿ.ಪುಟ್ಟಸಿದ್ದಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಬಿ.ಪುಷ್ಪ ಅಮರನಾಥ್, ರಾಕೇಶ್ ಪಾಪಣ್ಣ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಕೆ.ರಾಮಯ್ಯ, ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಇದ್ದರು.

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಬೋಧಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News