ಕ್ರಷರ್ ಶೆಡ್‌ಗೆ ಪೊಲೀಸ್ ದಾಳಿ: ಭಾರೀ ಸ್ಫೋಟಕ, ಡಿಟೊನೇಟರ್‌ಗಳ ವಶ !
ಶಿವಮೊಗ್ಗ, ಡಿ.8: ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದ ಕಲ್ಲು ಗಣಿ ಕ್ರಷರ್‌ವೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಶೆಡ್‌ನಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತು ಹಾಗೂ ಡಿಟೊನೇಟರ್‌ಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಆರೋಪಿ ಪರಾರಿಯಾಗಿದ್ದಾನೆ.
ಅಕ್ರಮ ಸಂಗ್ರ: ಸ್ಫೋಟಕಗಳು ಪತ್ತೆಯಾದ ಕ್ರಷರ್ ಜಿ. ವಾಸು ಎಂಬವರಿಗೆ ಸೇರಿದ್ದಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಗೆಜ್ಜೇನಹಳ್ಳಿ ಗ್ರಾಮದ ಸಂತೋಷ್ ಎಂಬಾತನು ಈ ಸ್ಫೋಟಕ ಸಾಮಗ್ರಿಗಳನ್ನು ಶೆಡ್‌ನಲ್ಲಿ ದಾಸ್ತಾನು ಮಾಡಿದ್ದನು ಎನ್ನಲಾಗಿದೆ. ಕಲ್ಲು ಗಣಿಗಳಿಗೆ ಬಳಸಲು ಹಾಗೂ ಇತರ ಕಲ್ಲು ಗಣಿಗಳಿಗೆ ಮಾರಾಟ ಮಾಡಲು ಈ ಸ್ಫೋಟಕಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ಹೇಳಲಾಗಿದೆ. ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಈ ಸ್ಫೋಟಕ ವಸ್ತುಗಳನ್ನು ಬಾಂಬ್ ನಿಷ್ಕ್ರಿಯ ದಳಕ್ಕೆ ಒಪ್ಪಿಸಿದ್ದಾರೆ. ಬಳಿಕ ಅವರು ಇವುಗಳನ್ನು ನಾಶಪಡಿಸಿದ್ದಾರೆ. ಉಳಿದಂತೆ ಕೆಲ ಸ್ಫೋಟಕ ವಸ್ತುಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅವುಗಳನ್ನು ವಿಧಿ-ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ. ಅವ್ಯಾಹ: ಈ ಹಿಂದೆಯೂ ಗೆಜ್ಜೇನಹಳ್ಳಿ ಸುತ್ತಮುತ್ತಲಿನ ಕಲ್ಲು ಗಣಿ ಕ್ರಷರ್‌ಗಳಲ್ಲಿ ಭಾರೀ ಪ್ರಮಾಣದ ಸ್ಫೋಟಕ, ಜಿಲೆಟಿನ್ ಕಡ್ಡಿ ಸೇರಿದಂತೆ ಹಲವು ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇಲ್ಲಿನ ಕೆಲ ಕಲ್ಲು ಗಣಿಗಳಲ್ಲಿ ಕಾನೂನುಬಾಹಿರವಾಗಿ ಸ್ಫೋಟಕ ವಸ್ತು ದಾಸ್ತಾನು ಹಾಗೂ ಬಳಕೆ ಮಾಡುವುದು ಅವ್ಯಾಹತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಡಿವೈಎಸ್ಪಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸ್ಫೋಟಕ ವಶಕ್ಕೆ
ದಾಳಿಯ ವೇಳೆ ರಟ್ಟಿನ ಬಾಕ್ಸ್‌ಗಳಲ್ಲಿಡಲಾಗಿದ್ದ 78 ಕಟ್ಟು ಸ್ಫೋಟಕ (ಎಕ್ಸ್‌ಪ್ಲೋಸಿವ್) ಹಾಗೂ 30 ಕಟ್ಟು ಡಿಟೊನೇಟರ್‌ಗಳು ಪತ್ತೆಯಾಗಿವೆ. ಪ್ರತೀ ಕಟ್ಟಿನಲ್ಲಿ 200 ಸ್ಫೋಟಕ ಹಾಗೂ 50 ಡಿಟೊನೇಟರ್‌ಗಳಿವೆ. ಒಟ್ಟಾರೆ 15,600 ಸ್ಫೋಟಕ ಹಾಗೂ 1,500 ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವುಗಳ ವೌಲ್ಯ ಲಕ್ಷಾಂತರ ರೂ.ಆಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಎರ್ರಾಬಿರ್ರಿ ಸ್ಫೋಟ!
ಕಲ್ಲುಗಂಗೂರು, ಗೆಜ್ಜೇನಹಳ್ಳಿ ಸುತ್ತಮುತ್ತಲು ಭಾರೀ ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇತ್ತೀಚೆಗೆ ಕಲ್ಲು ಬಂಡೆಗಳ ಸ್ಫೋಟವನ್ನು ಅವ್ಯಾಹತವಾಗಿ, ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಸ್ಫೋಟದ ಸದ್ದು ಕಿವಿಗಡಚಿಕ್ಕುವಂತಿದ್ದು, ಸುತ್ತಮುತ್ತಲಿನ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ತಿಳಿದುಬಂದಿದೆ.
ನಿಯಮಬಾಹಿರವಾಗಿ ಸ್ಫೋಟ ನಡೆಯುತ್ತಿರುವ ಮಾಹಿತಿಯಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಹಾಗೂ ಜಾಣ ವೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಈ ನಡೆಯು ಸ್ಥಳೀಯ ನಾಗರಿಕ ವಲಯದಲ್ಲಿ ವಿವಿಧ ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.