ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರಕಾರ ರಾಜ್ಯದಲ್ಲಿ ಉಳಿದ ನಿದರ್ಶನವಿಲ್ಲ: ಮಾಜಿ ಪ್ರಧಾನಿ ದೇವೇಗೌಡ
► ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಪ್ರಧಾನಿ ಜೊತೆ ಚರ್ಚೆ
► ತೋಟಗಾರಿಕಾ ಬೆಳೆಗಳ ಸಮಸ್ಯೆ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ
ಚಿಕ್ಕಮಗಳೂರು, ಡಿ.8: ರಾಜ್ಯದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರಕಾರಗಳು ಇತಿಹಾಸದಲ್ಲಿ ಉಳಿದ ನಿದರ್ಶನಗಳಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಶುಕ್ರವಾರ ನಗರದ ಸುಭಾಶ್ಚಂದ್ರಬೋಸ್ ಆಟದ ಮೈದಾನದಲ್ಲಿ ಕಡೂರು, ವಿಧಾನಸಭಾ ಕ್ಷೇತ್ರದ ಅಡಿಕೆ ಮತ್ತು ತೆಂಗು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕಡೂರು ಶಾಸಕ ವೈಎಸ್‌ವಿ ದತ್ತ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಾನಿಗೊಳಗಾಗಿರುವ ತೆಂಗು ಬೆಳೆಗಾರನ ಹೆಸರು ಮತ್ತು ಹಾನಿಗೊಳಗಾಗಿರುವ ಮರಗಳ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ದಾಖಲೆಯನ್ನು ತಯಾರಿಸುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ತೋಟಗಾರಿಕಾ ಅಧಿಕಾರಿಗಳು, ಕಂದಾಯಾಧಿಕಾರಿಗಳಿಗೆ ಸೂಚಿಸುವಂತೆ ರಾಜ್ಯದ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿಕೊಳ್ಳಲಾಗಿದ್ದರೂ ಈವರೆಗೂ ಸಿಎಂ ಆ ಬಗ್ಗೆ ಗಮನ ಹರಿಸಿಲ್ಲ ಎಂದು ಸಿಡಿಮಿಡಿಗೊಂಡರು.
ತೆಂಗು ಮತ್ತು ರಬ್ಬರ್ ಹಾಗೂ ಅಡಿಕೆ ಬೆಳೆಗಳು ವಿನಾಶದಂಚಿಗೆ ತಲುಪಿದೆ ದುರಂತವೆಂದರೆ ಈ ತೋಟಗಾರಿಕಾ ಬೆಳೆಗಳು ಕೆಲವೇ ಜಿಲ್ಲೆಗಳ ಲ್ಲಿರುವುದರಿಂದ ಆ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಅಮೂಲಾಗ್ರ ಸಮಸ್ಯೆ ಪರಿಹರಿಸಲು ಮುಂದಾಗದೇ ನಿರ್ಲಕ್ಷ್ಯಧೋರಣೆ ತಳೆದಿದೆ ಎಂದರು.
ಜಿಲ್ಲೆಯ ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರು, ಮಸಗಲಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಮುಂಬರುವ ಸದನದಲ್ಲಿ ಚರ್ಚಿಸುತ್ತೇನೆ ಅದಾಗದಿದ್ದರೆ ಸ್ವತಃ ಪ್ರಧಾನಿಯನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಕಡೂರು ಶಾಸಕ ದತ್ತ ಮಾತನಾಡಿ, ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಪ್ರಧಾನಿಮಂತ್ರಿ ಹುದ್ದೆ ಅಲಂಕರಿಸಿದ ದೇವೇಗೌಡರ ಆತ್ಮಚರಿತ್ರೆಯನ್ನು ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು. ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿದರು. ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಮುಖಂಡರಾದ ಮಂಜಪ್ಪ, ಚಂದ್ರಪ್ಪ ಮತ್ತಿತರರಿದ್ದರು.