ವಿದ್ಯುತ್ ಕಡಿತ ವಿರೋಧಿಸಿ ಗೋಣಿಬೀಡು ಬಂದ್
ಮೂಡಿಗೆರೆ, ಡಿ.8: ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಆರೋಪಿಸಿ ಗೋಣಿಬೀಡಿನ ವರ್ತಕರ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಗೋಣಿಬೀಡು ಹೋಬಳಿ ಕೇಂದ್ರ ಬಂದ್ ಮಾಡುವ ಮೂಲಕ ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗೋಣಿಬೀಡು, ಲಕ್ಷ್ಮೀಪುರ, ವಾಟಳ್ಳಿ, ಚಿನ್ನಿಗ-ಜನ್ನಾಪುರ, ಕಸ್ಕೇಬೈಲು, ಕಮ್ಮರಗೋಡು, ಜಿ.ಹೊಸಹಳ್ಳಿ, ಬೆಟ್ಟದಮನೆ, ಕಿರುಗುಂದ, ಹಂತೂರು, ಕಣಚೂರು, ಅಣಜೂರು, ನಿಡಗೋಡು ಸಹಿತ ಗೋಣಿಬೀಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಆಗಾಗ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಹೋಬಳಿಯ ವಿವಿಧ ಭಾಗದಲ್ಲಿ ಕೆಟ್ಟುಹೋಗಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾಯಿಸಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ಪ್ರತೀದಿನ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ, ರೈತರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಕೂಡಲೇ ಅಧಿಕಾರಿಗಳು ಎಚ್ಚೆತ್ತು ತಮ್ಮ ಎಲ್ಲ ಬೇಡಿಕೆಗಳನ್ನೂ ಈಡೇರಿಸಬೇಕು ಇಲ್ಲದಿದ್ದಲ್ಲಿ ಮುಂದೆ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವೃತ್ತ ನಿರೀಕ್ಷಕ ಜಗದೀಶ್, ಪಿಎಸ್ಸೈ ರಫೀಕ್, ರಾಘವೇಂದ್ರ ಮತ್ತು ಸಿಬ್ಬಂದಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ವರ್ತಕರ ಸಂಘದ ಅಧ್ಯಕ್ಷ ಅರವಿಂದ, ಉಪಾಧ್ಯಕ್ಷ ಮುಹಮ್ಮದ್ ಅಲಿ, ಕಾರ್ಯದರ್ಶಿ ಪರಮೇಶ್, ಜೆಡಿಎಸ್‌ನ ಜ್ಯೋತಿ ವಿಠ್ಠಲ್, ಬಿಎಸ್ಪಿ ಮುಖಂಡ ಯು.ಬಿ.ಮಂಜಯ್ಯ, ಮುನಾವರ್ ಅಲಿ, ಶಿವೇಗೌಡ, ಶೇಷೇಗೌಡ, ಜೋಹರ್ ಅಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.