ಜಾತಿ, ಮತ, ಧಾರ್ಮಿಕ ಸಂಘರ್ಷ ದೇಶಕ್ಕೆ ಮಾರಕ: ತಿಪ್ಪೇರುದ್ರಪ್ಪ
ಚಿಕ್ಕಮಗಳೂರು, ಡಿ.8: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಂವಿಧಾನಿಕ ಕಾನೂನು ಹಾಗೂ ಧಾರ್ಮಿಕ ಅನುಸರಣೆಯ ಬಗ್ಗೆ ಸಂಘರ್ಷ ಕಂಡುಬರುತ್ತಿದ್ದು, ಇದು ದೇಶದ ಅಖಂಡತೆಯ ದೃಷ್ಠಿಯಲ್ಲಿ ಸರಿಯಾದ ದಾರಿಯಲ್ಲ ಎಂದು ಪತ್ರಕರ್ತ ಬಿ. ತಿಪ್ಪೇರುದ್ರಪ್ಪ ಹೇಳಿದ್ದಾರೆ.
ಅವರು ನಗರದ ಅಂಬೇಡ್ಕರ್ ಶಾಲೆಯಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ, ಧರ್ಮ, ಜಾತಿ, ಮತದ ಹೆಸರಿನಲ್ಲಿ ಸಂಘ ರ್ಷಣೆ ನಡೆಯುತ್ತಿರುವುದು ದೇಶದ ಭವಿಷ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಎಲ್ಲಾ ಧರ್ಮಿಯರೂ ಸೋದರತೆಯ ಭಾವನೆಯಿಂದ ಇದ್ದು, ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ನುಡಿದರು.
ಸಂವಿಧಾನವು ಶ್ರೇಷ್ಠ ಗ್ರಂಥವಾಗಿದೆ. ರಾಜಕೀಯ ಪ್ರಭುತ್ವಕ್ಕೆ ಒಂದು ನೆಲೆ ಸಿಗಬೇಕಾದರೆ ಸಾಮಾಜಿಕ ಪ್ರಜಾಪ್ರಭುತ್ವ ಅತಿ ಮುಖ್ಯವಾಗಿದೆ ಎಂದ ಅವರು, ಸಂವಿದಾನದಲ್ಲಿ ತಿಳಿಸಿರುವ ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವವನ್ನು ಬೆಳಸಿಕೊಳ್ಳ ಬೇಕಿದೆ ಎಂದು ತಿಳಿಸಿದರು.
ಬಿ.ಎಸ್.ಪಿ ಮುಖಂಡ ಕೆ.ಟಿ. ರಾಧಾಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾಸಂಸ್ಥೆಯ ಜಿ.ಕೆ. ಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾರ್ತಾ ಸಹಾಯಕ ಬಿ. ಮಂಜುನಾಥ್ ಹಾಗೂ ಕೆಎಸ್ಸಾರ್ಟಿಸಿ ಕಾರ್ಮಿಕ ಮುಖಂಡ ದೀಪಕ್, ವೇಲಾಯುಧನ್ ಮಾತನಾಡಿದರು. ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಉಮಾಮಹೇಶ್ವರ್, ಶಿಕ್ಷಕರಾದ ರುದ್ರಪ್ಪ, ನೀಲಕಂ ಟಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಜನಸಾಮಾನ್ಯರು ವೌಢ್ಯತೆಯಿಂದ ದೂರವಿದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಇದು ಸರಿಯಲ್ಲ. ಶ್ರಮವಿದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಸಂವಿಧಾನದ ಆಶಯದಂತೆ ಸರಕಾರಗಳು ತಮ್ಮ ಕಾರ್ಯಗಳನ್ನು ಕೈಗೊಂಡಾಗ ಜನಸಾಮಾನ್ಯರು, ಶೋಷಿತರು, ದುರ್ಬಲ ವರ್ಗದವರೆಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯವಾಗುತ್ತದೆ.
ಕೆ.ಟಿ. ರಾಧಾಕೃಷ್ಣ, ಬಿ.ಎಸ್.ಪಿ. ಮುಖಂಡ.