ಡಿ.16ರಿಂದ ತುಂಗಾ ಏತ ನೀರಾವರಿ ಪ್ರಾಯೋಗಿಕ ಆರಂಭ: ಸಚಿವ ಕಾಗೋಡು
ಶಿವಮೊಗ್ಗ, ಡಿ.8: ಜಿಲ್ಲೆಯ ಮಹತ್ವಾಕಾಂಕ್ಷೆಯ ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಡಿಸೆಂಬರ್ 16ರಂದು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪರವರು ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ತುಂಗಾ ಏತ ನೀರಾವರಿ ಯೋಜನೆಯನ್ನು ಡಿ.16ರಂದು ಪ್ರಾಯೋಗಿಕ ಕಾರ್ಯಾರಂಭ ಮಾಡಲು ಎಲ್ಲಾ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೋಜನೆ ವಿವರ: ತುಂಗಾ ಏತ ನೀರಾವರಿ ಯೋಜನೆಯನ್ನು ಕೃಷ್ಣಾ ನದಿ ನೀರಾವರಿ ಅಡಿ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ 1.347 ಟಿಎಂಸಿ ನೀರನ್ನು ಈ ಯೋಜನೆಗೆ ಬಳಸಿಕೊಂಡು 71.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ 2012ರಲ್ಲಿ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಯೋಜನೆಯಿಂದ ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ, ಬಾರೇಹಳ್ಳ ಹಾಗೂ ಗೌಡನ ಕೆರೆಯ ಕೆಳಭಾಗದಲ್ಲಿ ಬರುವ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಿಗೆ ಅನುಕೂಲವಾಗುವಂತೆ ಎರಡು ಕೊಳವೆ ಮಾರ್ಗಗಳಿಂದ ನೀರನ್ನು ಒದಗಿಸಲಾಗುವುದು. ಸಚಿವರ ಅಸಮಾಧಾನ: ಹೊಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಅನುಷ್ಠಾನದ ಕುರಿತು ಸಚಿವರು ಈ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ 10ವರ್ಷಗಳಿಂದ ಯೋಜನೆ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಪೈಪ್‌ಲೈನ್‌ನಲ್ಲಿ ನೀರು ಸೋರುವಿಕೆ ಕುರಿತು ವರದಿಗಳು ಬಂದಿದ್ದು, ಯೋಜನೆಯ ಅನುಷ್ಠಾನದ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಲು ಮುಖ್ಯ ಇಂಜಿನಿಯರ್ ಅವರಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.