ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ

Update: 2017-12-08 18:02 GMT

ಬಣಕಲ್, ಡಿ.8: ದಲಿತರು, ಶೋಷಿತರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶೋತ್ತರಕ್ಕೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಅಂಬೇಡ್ಕರ್ ಸಂಘದ ಪ್ರಮುಖ ಹಾಗೂ ಆರ್‌ಟಿಐ ಕಾರ್ಯಕರ್ತ ಪ್ರಭಾಕರ್.ಎಸ್.ಬಿನ್ನಡಿ ಹೇಳಿದ್ದಾರೆ.

ಅವರು ಕೊಟ್ಟಿಗೆಹಾರದ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ಕಾರ್ಯಕ್ರಮ ಆಚರಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಆಸೆ ದಲಿತರು, ಶೋಷಿತರು, ಸ್ವತಂತ್ರರಾಗಿ ಬದುಕಿ ದೌರ್ಜನ್ಯಕ್ಕೆ ಒಳಗಾಗದೇ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬೇಕೆಂಬ ದೊಡ್ಡ ಆಶಯ ಹೊಂದಿದ್ದರು. ಆದರೆ 61 ವರ್ಷ ಕಳೆದರೂ ಅಂಬೇಡ್ಕರ್ ಅವರ ಆಶೆಗಳು ಈಡೇರಿಲ್ಲ ಎಂದು ನುಡಿದರು.

ಬಿಎಸ್ಪಿಯ ತಾಲೂಕು ಉಪಾಧ್ಯಕ್ಷ ಜೈಪಾಲ್ ಮಾತನಾಡಿ, ಈಗ ದೇಶದಲ್ಲಿ ಸಂವಿಧಾನದ ವಿರೋಧಿ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ, ಇದು ಖಂಡನೀಯವಾದುದು.ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತರ ಪರ ಧ್ವನಿ ಎತ್ತಿದವರು. ಅವರು ದೊಡ್ಡ ವಿಶ್ವಕೋಶವಿದ್ದಂತೆ. ಅವರಿಂದ ಇಂದು ಸಂವಿಧಾನದಲ್ಲಿ ಬಹುಜನರಿಗೆ ಸ್ವತಂತ್ರರಾಗಿ ಬದುಕಲು ಸಾಧ್ಯವಾಗಿದೆ. ಆದರೂ ಅದನ್ನು ಸಂವಿಧಾನ ವಿರೋಧಿತನದಿಂದ ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದರು.

 ಹಾಜಿ ಟಿ.ಎ.ಖಾದರ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಶಿಕ್ಷಣ, ಜ್ಞಾನ, ಸಂಪತ್ತು ಮತ್ತು ಅರಿವು ಹೊಂದಬೇಕೆಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಚಲ ನಿಲುವು ಆಗಿತ್ತು. ಅವರ ಆದರ್ಶಗಳನ್ನು ನಾವು ಪಾಲಿಸಿದರೆ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂಘಟನೆಯ ಉಪಾಧ್ಯಕ್ಷಟಿ.ಎಂ.ಮಹೇಶ್, ಬಿಎಸ್ಪಿ ತಾ.ಕಾರ್ಯದರ್ಶಿ ಗೋಪಾಲ್, ಆಟೋ ಸಂಘದ ಅಧ್ಯಕ್ಷ ದೇವೇಂದ್ರ, ಕಾರ್ಯದರ್ಶಿ ನಾಗೇಶ್, ಟಿ.ಪಿ.ಪೂರ್ಣೇಶ್, ಕಿರಣ್‌ಬಿನ್ನಡಿ, ರಾಜೇಶ್, ಸತೀಶ್, ಜಗದೀಶ್, ಮಹೇಶ್, ಹಾಜಿ ಮಹಮ್ಮದ್, ಅಬ್ದುಲ್‌ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News