ಸಹಪ್ರಾಧ್ಯಾಪಕರ ಹುದ್ದೆ ಭರ್ತಿಯಲ್ಲಿರುವ ಮೀಸಲಾತಿ ಗೊಂದಲ ಬಗೆಹರಿಸಿ: ಬಸವರಾಜ ಹೊರಟ್ಟಿ
ಬೆಂಗಳೂರು, ಡಿ.9: ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹ ಪ್ರಾಧ್ಯಾಪಕ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿರುವ ಮೀಸಲಾತಿ ಗೊಂದಲವನ್ನು ಬಗೆಹರಿಸಬೇಕೆಂದು ವಿಧಾನಪರಿಷತ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಗೆ ಪತ್ರ ಬರೆದಿರುವ ಅವರು, ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಸಹ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಅನುಮತಿ ನೀಡಿರುವುದು ಸಂತೋಷದ ವಿಚಾರ. ಆದರೆ, ಈ ಭರ್ತಿ ಪ್ರಕ್ರಿಯೆಯಲ್ಲಿರುವ ಮೀಸಲಾತಿ ಗೊಂದಲವನ್ನು ಬಗೆಹರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ತಿಳಿಸಿದರು.
ಪ್ರತಿ ವಿಷಯಕ್ಕೆ ಪ್ರತ್ಯೇಕ ಮೀಸಲಾತಿ ಅಗತ್ಯವಿಲ್ಲ: ಎಲ್ಲ ವಿಷಯಗಳ ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ಒಂದೇ ವೇತನ ಶ್ರೇಣಿ ಹಾಗೂ ಒಂದೇ ಕೇಡರ್ ಹುದ್ದೆಗಳಾಗಿರುವುದರಿಂದ ಪ್ರತಿ ವಿಷಯಕ್ಕೂ ಪ್ರತ್ಯೇಕ ಮೀಸಲಾತಿ ಅಗತ್ಯವಿಲ್ಲ. ಎಲ್ಲ ಹುದ್ದೆಗಳನ್ನು ಒಗ್ಗೂಡಿಸಿ ಒಂದೇ ಘಟಕವಾಗಿ ಪರಿಗಣಿಸಬೇಕೆಂದು ಅವರು ತಿಳಿಸಿದ್ದಾರೆ.
ಪ್ರತಿ ವಿಷಯಕ್ಕೂ ಪ್ರತ್ಯೇಕ ಮೀಸಲಾತಿ ನಿಗದಿ ಪಡಿಸಿದರೆ ಕೆಲವು ವಿಷಯಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಪಂಗಡಗಳ ಅಭ್ಯರ್ಥಿಗಳ ಕೊರತೆಯಿಂದ ಆ ಹುದ್ದೆಗಳು ಭರ್ತಿಯಾಗದೆ ಬ್ಯಾಕ್‌ಲಾಗ್ ಹುದ್ದೆಗೆ ಸೇರ್ಪಡೆಯಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಒಂದು ಸಂಸ್ಥೆಯ ಎಲ್ಲ ಕಾಲೇಜುಗಳಲ್ಲಿರುವ ಎಲ್ಲ ವಿಷಯಗಳ ಸಹಪ್ರಾಧ್ಯಾಪಕರ ಒಟ್ಟು ಹುದ್ದೆಗಳನ್ನು ಒಂದು ಗುಂಪಾಗಿ ಪರಿಗಣಿಸಿ ಮೇಲ್ಕಂಡಂತೆ ಶೇಕಡಾವಾರು ಮೀಸಲಾತಿ ಪ್ರಮಾಣ ನಿಗದಿಪಡಿಸಿದರೆ ಯಾವ ವರ್ಗಕ್ಕೂ ಅನ್ಯಾಯವಾಗುವುದಿಲ್ಲ ಎಂದು ಅವರು ಪತ್ರದ ಮುಖೇನ ಮನವಿ ಮಾಡಿದ್ದಾರೆ.