ಶಿವಮೊಗ್ಗ : ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ಪೊಲೀಸರ ದಾಳಿ

Update: 2017-12-09 13:34 GMT

ಶಿವಮೊಗ್ಗ, ಡಿ. 9: ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ಪೊಲೀಸರ ದಾಳಿ ಮುಂದುವರಿದಿದೆ. ಜಿಲ್ಲಾ ಅಪರಾಧ ಪತ್ತೆ ದಳ (ಡಿ.ಸಿ.ಬಿ.) ಹಾಗೂ ತೀರ್ಥಹಳ್ಳಿ ಪೊಲೀಸರು, ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಳು ದಾಸ್ತಾನು ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ. 

ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಮರ ಹಾಗೂ ಕಲ್ಮನೆ ಗ್ರಾಮಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 25.42 ಲಕ್ಷ ರೂ. ಮೌಲ್ಯದ 250 ಲಾರಿ ಲೋಡ್ ಮರಳು ಪತ್ತೆ ಹಚ್ಚಿದ್ದಾರೆ. ಡಿಸಿಬಿ ಇನ್ಸ್‍ಪೆಕ್ಟರ್ ಕೆ.ಕುಮಾರ್, ತೀರ್ಥಹಳ್ಳಿ ಸರ್ಕಲ್ ಇನ್ಸ್‍ಪೆಕ್ಟರ್ ಸುರೇಶ್, ವಲಯ ಅರಣ್ಯಾಧಿಕಾರಿ ಶಫಿ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 

ಅಕ್ರಮ ಮರಳು ದಾಸ್ತಾನಿಗೆ ಸಂಬಂಧಿಸಿದಂತೆ ಎಲ್.ಡಿ.ನಾಗರಾಜ್, ಚಂದ್ರುಶೇಖರ್, ನಾಗೇಶ್, ಅಂಗಡಿ ಗುಂಡಪ್ಪ, ಶ್ರೀನಿವಾಸ್‍ಗೌಡ, ಪ್ರಕಾಶ್, ಜ್ಞಾನೇಂದ್ರ, ನಟೇಶ್, ಶ್ರೀನಿವಾಸ್ ಪೂಜಾರಿ, ಮಂಜುನಾಥ್ ಎಂಬುವರ ವಿರುದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ. 

ದಂಧೆಗೆ ಅವಕಾಶವಿಲ್ಲ: ಗ್ರಾಮೀಣ ಭಾಗದಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ, ಮನೆ ದುರಸ್ತಿಯಂತಹ ಕಾರ್ಯಗಳಿಗೆ ಮರಳು ಕೊಂಡೊಯ್ಯಲು ಅಡ್ಡಿಪಡಿಸುವುದಿಲ್ಲ. ಆದರೆ ಕಾನೂನುಬಾಹಿರವಾಗಿ ಮರಳು ತೆಗೆದು ದಾಸ್ತಾನುಗೊಳಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. 

ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ ಬಗ್ಗೆ ನೇರವಾಗಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಜಿಲ್ಲಾ ಅಪರಾಧ ದಳ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News