ಸುಪಾರಿ ನೀಡಿದ ಆರೋಪ ನಿರಾಕರಿಸಿದ ಬೆಳಗೆರೆ

Update: 2017-12-09 15:02 GMT

ಬೆಂಗಳೂರು, ಡಿ. 9: ತನ್ನ ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಪತ್ರಕರ್ತ ರವಿ ಬೆಳಗೆರೆ ಅವರನ್ನು ಬೆಳಗ್ಗೆಯಿಂದಲೇ ತೀವ್ರ ವಿಚಾರಣೆಗೆ ಗುರಿಪಡಿಸಿರುವ ಸಿಸಿಬಿ ಪೊಲೀಸರು ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಯಾವ ಕಾರಣಕ್ಕೆ ಸುಪಾರಿ ನೀಡಿದ್ದು, ವೈಯಕ್ತಿಕ ಕಾರಣವೇ ಅಥವಾ ಬೇರೆ ಇನ್ನಾವುದಾದರೂ ದ್ವೇಷ ಇತ್ತೇ ಎಂಬ ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ರವಿ ಬೆಳಗೆರೆ ವಿಚಾರಣೆ ವೇಳೆ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಸಿಬಿ ಡಿಸಿಪಿ ಜಿನೇಂದ್ರ ಕಣಗಾವಿ ಮಾರ್ಗದರ್ಶನದಲ್ಲಿ ಎಸಿಪಿ ಸುಬ್ರಮಣಿ, ಇನ್ಸ್ಪೆಕ್ಟರ್ ರಾಜು ನೇತೃತ್ವದ ತಂಡ ತನಿಖೆಗೆ ಸಂಬಂಧಿಸಿದಂತೆ ಅಗತ್ಯ ಪ್ರಶ್ನೆಗಳ ಪಟ್ಟಿ ಸಿದ್ಧಪಡಿಸಿಕೊಂಡು ಬೆಳಗೆರೆ ಅವರಿಂದ ಉತ್ತರ ಪಡೆದಿದ್ದಾರೆ. ಅಲ್ಲದೆ, ಬೆಳಗೆರೆ ನೀಡಿದ ಮಾಹಿತಿ ಹಾಗೂ ಪ್ರಶ್ನೆಗಳಿಗೆ ತಾಳೆ ಹಾಕಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಈ ಮಧ್ಯೆ ರವಿ ಬೆಳಗೆರೆ ಆರೋಗ್ಯ ಸ್ಥಿತಿ ಪರಿಶೀಲನೆ ಬಳಿಕ ಪದ್ಮನಾಭನಗರದಲ್ಲಿನ ಹಾಯ್ ಬೆಂಗಳೂರು ಪತ್ರಿಕಾ ಕಚೇರಿ, ರಾಜರಾಜೇಶ್ವರಿ ನಗರದ ಬಳಿಯ ಪಟ್ಟಣಗೆರೆ ಲೇಔಟ್‌ನಲ್ಲಿರುವ ಬೆಳಗೆರೆ ಅವರ ಎರಡನೆ ಪತ್ನಿ ಯಶೋಮತಿ ಅವರ ನಿವಾಸಕ್ಕೆ ಬೆಳಗೆರೆ ಅವರನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ.

ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ್ದೇಕೆ ಮತ್ತು ಶಾರ್ಪ್ ಶೂಟರ್ ಶಶಿಧರ್ ಮುಂಡೆವಾಡನಿಗೂ ಹಾಗೂ ರವಿಬೆಳಗೆರೆಗೂ ಇರುವ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮಾತ್ರವಲ್ಲ, ಶಶಿಧರ್ ನೀಡಿದ್ದ ಪಿಸ್ತೂಲ್ ಬಗ್ಗೆಯೂ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಬೆಳಗೆರೆ ನಿವಾಸದಲ್ಲಿ ವಶಪಡಿಸಿಕೊಂಡಿದ್ದ ಜಿಂಕೆ ಚರ್ಮ ಹಾಗೂ ಆಮೆ ಚಿಪ್ಪು ದೊರೆತಿರುವ ಬಗ್ಗೆ ಸಿಸಿಬಿ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಜಿಂಕೆ ಚರ್ಮವನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಒಂದು ವೇಳೆ ಅವರು ಅಕ್ರಮವಾಗಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ತಂದಿರುವುದು ಸಾಬೀತಾದರೆ ಬೆಳಗೆರೆ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಈ ನಡುವೆ ಉತ್ತರ ಕನ್ನಡದ ದಾಂಡೇಲಿ ಸೇರಿದಂತೆ ವಿವಿಧೆಡೆಗಳಲ್ಲಿರುವ ರವಿ ಬೆಳಗೆರೆ ಒಡೆತನದ ಫಾರ್ಮ್‌ಹೌಸ್‌ಗಳ ಮೇಲೆಯೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಬೆಳಗೆರೆ ಎರಡನೆ ಪತ್ನಿ ಯಶೋಮತಿ ಅವರ ರಾಜರಾಜೇಶ್ವರಿ ನಗರದ ಬಳಿಯ ಪಟ್ಟಣಗೆರೆ ಲೇಔಟ್‌ನಲ್ಲಿರುವ ಮನೆಯಲ್ಲಿಯೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಲಲಿತಾ ಅನಾರೋಗ್ಯ: ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ನಿನ್ನೆ ಸಿಸಿಬಿ ಪೊಲೀಸರ ವಶದಲ್ಲಿರುವ ಪತ್ರಕರ್ತ ರವಿ ಬೆಳಗೆರೆ ಬಂಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಪತ್ನಿ ಲಲಿತಾ ಬೆಳಗೆರೆ ಅವರು ನಿರಾಕರಿಸಿದ್ದಾರೆ.
ಜ್ವರದಿಂದ ಬಳಲುತ್ತಿರುವ ಲಲಿತಾ ಅವರು, ರವಿ ಬೆಳಗೆರೆ ಬಂಧನದ ನಂತರ ಮತ್ತಷ್ಟು ಅಸ್ವಸ್ಥರಾಗಿದ್ದಾರೆ. ಅತ್ಯಂತ ಸೂಕ್ಷ್ಮ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಪ್ರಕರಣದ ಬಗ್ಗೆ ಲಲಿತಾ ಅವರ ಹೇಳಿಕೆ ಮಹತ್ವದ್ದಾಗಿದೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿಲ್ಲ ಎಂದು ಗೊತ್ತಾಗಿದೆ.

ಸಿಗರೇಟ್‌ಗೆ ಕ್ಯಾತೆ: ಪತ್ರಕರ್ತ ಬೆಳಗೆರೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಸಿಗರೇಟ್‌ಗಾಗಿ ತೀವ್ರ ಕ್ಯಾತೆ ತೆಗೆದಿದ್ದು, ತನಗೆ ಸಿಗರೇಟ್ ಸೇದುವ ಹವ್ಯಾಸವಿದೆ. ನೀವು ಒಂದೆರಡು ಸಿಗರೇಟ್ ನೀಡಿದರೆ ನನಗೆ ಆಗುವುದಿಲ್ಲ. ಹೀಗಾಗಿ ಕನಿಷ್ಟ ಒಂದೆರಡು ಪ್ಯಾಕ್ ಸಿಗರೇಟ್ ನೀಡಲೇಬೇಕು ಎಂದು ಬೆಳಗೆರೆ ಪಟ್ಟು ಹಿಡಿದಿದ್ದರು ತಿಳಿದು ಬಂದಿದೆ.

ಪತ್ರಕರ್ತನ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಶಶಿಧರ್ ಪ್ರಮುಖ ಆರೋಪಿಯಾಗಿದ್ದು, ರವಿ ಬೆಳಗೆರೆ ಎ-2 ಹಾಗೂ ತಲೆ ಮರೆಸಿಕೊಂಡಿರುವ ವಿಜು ಬಡಿಗೇರ್ ಎಂಬವ ಮೂರನೆ ಆರೋಪಿ ಎಂದು ಎಫ್‌ಐಆರ್ ದಾಳಿಸಿದ್ದು, ತಲೆ ಮರೆಸಿಕೊಂಡ ಆರೋಪಿಯ ಬಂಧನಕ್ಕೂ ಸಿಸಿಬಿ ಪೊಲೀಸರ ತಂಡ ಶೋಧ ಕಾರ್ಯ ಕೈಗೊಂಡಿದೆ.

ಸೋಮವಾರ ಕೋರ್ಟ್‌ಗೆ ಹಾಜರು:
‘ವಿಚಾರಣೆಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ರವಿ ಬೆಳಗೆರೆ ಅವರನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದು, ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆಯಲಾಗುತ್ತಿದೆ. ಅವರು ನೀಡುವ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಾಗುವುದು
-ಸುನಿಲ್‌ಕುಮಾರ್ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News