ಬಿಜೆಪಿ ಸಾಧನೆಯ ಬಗ್ಗೆ ಸುಳ್ಳು ಹೇಳಿ ಮತಯಾಚಿಸಿ: ಕಾರ್ಯಕರ್ತರಿಗೆ ಈಶ್ವರಪ್ಪ ಪಾಠ!

Update: 2017-12-09 14:04 GMT

ಬೆಂಗಳೂರು, ಡಿ.9: ಮತ ಯಾಚಿಸುವ ಸಂದರ್ಭ ಕಾರ್ಯಕರ್ತರು ಬಿಜೆಪಿ ಸರಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳಬೇಕು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ನಡೆದಿದೆ ಎನ್ನಲಾದ ಕಾರ್ಯಕ್ರಮಮವೊಂದರಲ್ಲಿ ಮಾತನಾಡಿದ ಈಶ್ವರಪ್ಪ. “ ಬಿಜೆಪಿ ಸರಕಾರ ಏನು ಮಾಡಿದೆ. ಕೇಂದ್ರ ಸರಕಾರ ಏನು ಮಾಡಿದೆ. ನಾವು ಬಂದ್ಮೇಲೆ ಏನೇನು ಮಾಡ್ತೇವೆ. ದಲಿತರಿಗೆ , ಹಿಂದುಳಿದವರಿಗೆ ರೈತರಿಗೆ ಹೆಣ್ಮಕ್ಕಳಿಗೆ ವಯಸ್ಸಾಗಿರೋರಿಗೆ ಏನು ಮಾಡುತ್ತೇವೆ ಈ ವಿಷಯಗಳೆಲ್ಲಾ ಗೊತ್ತಿರಬೇಕು. ನಾವಿದನ್ನೆಲ್ಲಾ ತಿಳ್ಕೊಂಡು ಹೋಗ್ಬೇಕು… ಅಕಸ್ಮಾತ್ ನಮಗೆ ಗೊತ್ತಿಲ್ಲ ಅಂದ್ರೆ… ಒಂದನ್ನು ನೆನಪಿಟ್ಕೋಬೇಕು… ಗೊತ್ತಿಲ್ಲ ಅಂತ ಯಾವಾಗ್ಲೋ ಒಪ್ಕೋರ್ದು ಸುಳ್ಳೋ ಪಳ್ಳೊ ಏನೋ ಹೇಳಿ ಬಂದಿಡ್ಬೇಕು”

“ವಾಜಪೇಯಿ ಇದ್ದಂತ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೊಡೆದು ಹೊಡೆದು ಸೈನಿಕರು ಸಾಯಿಸ್ಬಿಟ್ರು ಎಂದು ಹೇಳಬೇಕು.. ನೀವು ನೋಡಿದ್ದೀರಾ .. ನಿಮಗೆ ಗೊತ್ತಿಲ್ಲ ಆದರೂ ಹೀಗೆ ಹೇಳ್ಬೇಕು.. ನೋಡಿ ವಾಜಪೇಯಿ ಇದ್ದ ಸಂದರ್ಭದಲ್ಲಿ ಪಾಕಿಸ್ತಾನದವ್ರು ತಲೆ ಎತ್ಲಿಲ್ಲ. ಮನಮೋಹನ್ ಸಿಂಗ್ ಬಂದಾಗ ಅಲ್ಲಿಂದ್ದಂತಹ ಪಾಕಿಸ್ತಾನದ ಸೈನಿಕರು  ಭಾರತದ ಸೈನಿಕರನ್ನು ಕೊಂದು ಹಾಕ್ಬಿಟ್ರು.. ನರೇಂದ್ರ ಮೋದಿಯವರು ಬರ್ತಾ ಇದ್ದಂಗೆ ಪಾಕಿಸ್ತಾನದವ್ರು ಇಲ್ಲಾ ಅನ್ಸಂತೆ ಮಾಡ್ಬಿಟ್ರು. ಇದು ನಡೆದಿದ್ದೂ ಹೌದು.. ಇಲ್ಲ ಅಂತ ಆಕಸ್ಮಾತ್  ಗೊತ್ತಿಲ್ಲ ಅಂತಂದ್ರೆ.. ನರೇಂದ್ರ ಮೋದಿ ಗಂಡುಗಲಿ ಅಂತ ಇಡೀ ಪ್ರಪಂಚ ಒಪ್ತಿದೆ ತಾನೇ..” ಎಂದು ಈಶ್ವರಪ್ಪ ಹೇಳಿದ್ದಾರೆ.

ಈಶ್ವರಪ್ಪರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ಸಾಧನೆಯ ಬಗ್ಗೆ ಸುಳ್ಳು ಹೇಳುವಂತೆ, ಸೈನಿಕರ ವಿಚಾರದ ಬಗ್ಗೆಯೂ ಸುಳ್ಳು ಹೇಳುವಂತೆ, ಇಲ್ಲದ ವಿಚಾರಗಳನ್ನು ಹೇಳುವಂತೆ ನಾಯಕರೊಬ್ಬರು ಕಾರ್ಯಕರ್ತರಿಗೆ ಪಾಠ ಹೇಳುತ್ತಿರುವುದು ಎಷ್ಟು ಸರಿ?, ಚುನಾವಣೆಯಲ್ಲಿ ಗೆಲುವಿಗಾಗಿ ಸೈನಿಕರ ವಿಚಾರದಲ್ಲೂ ರಾಜಕೀಯ ತಂತ್ರ ಬಳಸುತ್ತಿರುವುದು ರಾಷ್ಟ್ರೀಯ ಪಕ್ಷಕ್ಕೆ ಶೋಭೆಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಆದರೆ ಈ ಕಾರ್ಯಕ್ರಮ ನಡೆದದ್ದು ಯಾವಾಗ ಹಾಗು ಎಲ್ಲಿ ಎನ್ನುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News