ಮೋದಿ ಕಾಲು ಹಿಡಿದು ಹಣ ತಂದು ನೀರಾವರಿ ಯೋಜನೆಗಳ ಪೂರ್ಣಗೊಳಿಸುವೆ : ಯಡಿಯೂರಪ್ಪ

Update: 2017-12-09 16:02 GMT

ಯಾದಗಿರಿ, ಡಿ. 9: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಅವರ ಕಾಲು ಹಿಡಿದಾದರೂ 1 ಲಕ್ಷ ಕೋಟಿ ರೂ.ಅನುದಾನ ತಂದು ಕೃಷ್ಣಾ ಕಣಿವೆ ವ್ಯಾಪ್ತಿಯ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಶನಿವಾರ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂ.ಅನುದಾನ ಮೀಸಲಿಡುವುದಾಗಿ ಕೃಷ್ಣೆಯ ಮೇಲೆ ಆಣೆ ಪ್ರಮಾಣ ಮಾಡಿದ್ದ ರಾಜ್ಯ ಸರಕಾರ 50ಸಾವಿರ ಕೋಟಿ ರೂ.ಖರ್ಚು ಮಾಡಬೇಕಿತ್ತು. ಆದರೆ, ಕೇವಲ 6,400 ಕೋಟಿ ರೂ.ಗಳನ್ನಷ್ಟೇ ವೆಚ್ಚ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಸಿಲಿಕಾನ್ ಸಿಟಿಯಾಗಿದ್ದ ಬೆಂಗಳೂರು ನಗರ ಕಾಂಗ್ರೆಸ್ ಆಡಳಿತಾವಧಿಯಲ್ಲಿ ‘ಅತ್ಯಾಚಾರಿ’ ನಗರವಾಗಿ ಕುಖ್ಯಾತಿ ಗಳಿಸಿದೆ. ಅತ್ಯಾಚಾರ, ಕೊಲೆ, ಸುಲಿಗೆ ಹೆಚ್ಚಿದೆ ಎಂಬುದನ್ನು ಅಪರಾಧ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಇದು ನೋವು ತರುವ ಸಂಗತಿ ಎಂದು ತಿಳಿಸಿದರು.

ಹೈ.ಕ. ಅಭಿವೃದ್ಧಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 4,650 ಕೋಟಿ ರೂ.ಅನುದಾನ ಮೀಸಲಿಟ್ಟಿದ್ದು, 2,350 ಕೋಟಿ ರೂ.ಮಾತ್ರ ಬಿಡುಗಡೆ ಮಾಡಿದೆ. ಆ ಪೈಕಿ ಕೇವಲ 1,330 ಕೋಟಿ ರೂ.ಗಳನ್ನಷ್ಟೇ ವೆಚ್ಚ ಮಾಡಿದೆ. ಇದು ಸರಕಾರದ ಆಡಳಿತ ವೈಖರಿ ಎಂದು ಅಂಕಿ-ಅಂಶಗಳನ್ನು ಬಹಿರಂಗಪಡಿಸಿದರು.

ಹಗಲು ದರೋಡೆ: ತಲೆತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಹಗಲು ದರೋಡೆಯಲ್ಲಿ ತೊಡಗಿದೆ. ವಿದೇಶದಿಂದ ಮರಳು ತರಿಸುತ್ತಿದ್ದು, ಹಗಲು ದರೋಡೆಯಲ್ಲಿ ತೊಡಗಿದೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವ ಅನಂತಕುಮಾರ್, ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಮೇಲ್ಮನೆ ಸದಸ್ಯ ರಘುನಾಥ ರಾವ್ ಮುಲ್ಕಾಪುರೆ, ಶಂಕರಪ್ಪ, ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ಮಾಗನೂರ, ಮಾಜಿ ಸಚಿವ ರೇವುನಾಯ್ಕಾ ಬೆಳಮಗಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News