ನಗರವನ್ನು ಹಸಿರುಮುಗೊಳಿಸಲು ಜನತೆಯ ಕಾಳಜಿ ಅಗತ್ಯ: ಸಾಲುಮರದ ತಿಮ್ಮಕ್ಕ
ಬೆಂಗಳೂರು, ಡಿ.9: ಬೆಂಗಳೂರು ನಗರವನ್ನು ಹಸಿರುಮಯಗೊಳಿಸುವ ನಿಟ್ಟಿನಲ್ಲಿ ಇಲ್ಲಿ ವಾಸಿಸುವ ಪ್ರತಿಯೊಬ್ಬರು ಪರಿಸರದ ಕುರಿತು ಕಿಂಚಿತ್ ಕಾಳಜಿ ವಹಿಸಲಿ ಎಂದು ಪರಿಸರವಾದಿ ಸಾಲುಮರದ ತಿಮ್ಮಕ್ಕ ಆಶಿಸಿದ್ದಾರೆ.
ಶನಿವಾರ ಸಮರ್ಥನಂ ಸಂಸ್ಥೆ ಅಲರ್ಗನ್ ಸಹಯೋಗದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ 13ನೆ ಬೆಂಗಳೂರು ಮ್ಯಾರಾಥಾನ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂಲತಃ ಬೆಂಗಳೂರು ಹಸಿರುಮಯವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ನಗರ ಬೆಂಗಾಡಾಗಿದೆ. ಹೀಗಾಗಿ ಪುನಃ ಬೆಂಗಳೂರನ್ನು ಹಸಿರುಮಯಗೊಳಿಸುವ ನಿಟ್ಟಿನಲ್ಲಿ ಇಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ಕಾರ್ಯ ಮಗ್ನರಾಗಬೇಕು. ನಮ್ಮ ಮುಂದಿನ ಯುವ ಪೀಳಿಗೆ ಸ್ವಚ್ಛವಾಗಿ ಬದುಕಬೇಕಾದರೆ ಈ ಕ್ಷಣದಿಂದಲೇ ಪರಿಸರದ ಕುರಿತು ಕಾಳಜಿ ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ವಾತಿ ಸಿಂಗ್ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಮಾನವನನ್ನು ಒಳಗೊಂಡಂತೆ ಪ್ರತಿಯೊಬ್ಬರಿಗೂ ಅತ್ಯಗತ್ಯ. ಇಷ್ಟು ನೇರವಾದ ಸಂಬಂಧವಿರುವ ಪರಿಸರವನ್ನು ನಾವೆಲ್ಲರೂ ಪ್ರೀತಿಸೋಣ, ಉಳಿಸೋಣವೆಂದು ಕರೆ ನೀಡಿದರು.
ಅಲರ್ಗನ್ ಇಂಡಿಯಾದ ನಿರ್ದೇಶಕ ಕೆ.ಟಿ.ರಾಜನ್ ಮಾತನಾಡಿ, ಸಮರ್ಥನಂ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಪ್ರತಿಯೊಬ್ಬರು ಮೆಚ್ಚುವಂತದ್ದು ಎಂದರು.
ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಮಹಂತೇಶ್ ಮಾತನಾಡಿ, ಹಸಿರು ಉಪಕ್ರಮ ಮತ್ತು ಹಸಿರು ರಕ್ಷಣೆಗಾಗಿ ನಡೆದ ಜಾಗೃತಿಯ ಈ ವಾಕಥಾನ್‌ಗೆ ಅಭೂತಪೂರ್ವ ಬೆಂಬಲ ಸಿಕ್ಕಿರುವುದು ಅತ್ಯಂತ ಸಂತಸ ತಂದಿದೆ. ಪರಿಸರ ಸಂರಕ್ಷಣೆ ವಿಚಾರದಲ್ಲಿ ನಾವೆಲ್ಲಾ ಕೈಜೋಡಿಸಬೇಕಾದ ಅಗತ್ಯವಿದೆ. ಈ ಹಿಂದೆ ಸುಂದರ ಮತ್ತು ಹಸಿರು ನಗರವಾಗಿದ್ದ ಬೆಂಗಳೂರನ್ನು ಮತ್ತೆ ಹಸಿರು ನಗರವನ್ನಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಕೈ ಜೋಡಿಸೋಣ, ಒಟ್ಟಾಗಿ ದುಡಿಯೋಣ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯನಗರದ ಶಾಸಕರಾದ ಬಿ.ಎನ್.ಜಯಕುಮಾರ್ ವಹಿಸಿದ್ದರು. ಈ ವೇಳೆ ಬೈರಸಂದ್ರ ವಾರ್ಡ್‌ನ ಕಾರ್ಪೊರೇಟರ್ ನಾಗರಾಜು, ಅಲರ್ಗನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಧರ್ ರಂಗನಾಥನ್ ಮತ್ತಿತರರಿದ್ದರು.