ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಆಗ್ರಹ

Update: 2017-12-09 18:21 GMT

ಪೊನ್ನಂಪೇಟೆ, ಡಿ.9: ಕಾಂಗ್ರೆಸಿನಿಂದ ಮುಸ್ಲಿಮರಿಗೆ ಸರಿಯಾದ ನ್ಯಾಯ ದೊರೆತಿಲ್ಲ. ಇನ್ನಾದರೂ ಕೊಡಗಿನ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ನಿಂದ ನ್ಯಾಯ ಒದಗಿಸಲು ಪಕ್ಷದ ಹೈಕಮಾಂಡ್ ಗಂಭೀರ ಪ್ರಯತ್ನಗಳನ್ನು ಮಾಡಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಆಗ್ರಹಿಸಿದೆ.

ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರೂ ಕೊಡಗಿನ ಕಾಂಗ್ರೆಸ್‌ನಲ್ಲಿ ಬಹುಸಂಖ್ಯಾತರಾಗಿದ್ದಾರೆ. ಕಾಂಗ್ರೆಸ್‌ನಿಂದ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಇದುವರೆಗೂ ಸೂಕ್ತ ಸ್ಥಾನಮಾನ ದೊರೆತಿಲ್ಲ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೆಎಂಎ ಪರವಾಗಿ ಮಾತನಾಡಿದ ಸಂಸ್ಥೆಯ ಹಿರಿಯ ಉಪಾಧ್ಯಕ್ಷ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷ ಆಲೀರ ಎ. ಅಹ್ಮದ್ ಹಾಜಿ, ಮುಸ್ಲಿಮರು ಸೇರಿದಂತೆ ವಿವಿಧ ಜನಸಮುದಾಯಗಳನ್ನೊಳಗೊಂಡ ಅಲ್ಪಸಂಖ್ಯಾತರ ಪೈಕಿ ಬಹುಪಾಲು ಜನರು ಕಾಂಗ್ರೆಸ್‌ನ ಪಾರಂಪಾರಿಕ ಮತದಾರರಾಗಿದ್ದಾರೆ ಎಂದರು.
ಜಾತ್ಯತೀತ ತತ್ವದ ತಳಹದಿಯ ಮತ್ತು ಬಡವರ-ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದರು.

 ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸ್, ಕೊಡಗಿನ ಅಲ್ಪಸಂಖ್ಯಾತರ ರಾಜಕೀಯ ಉನ್ನತಿಯ ಬಗ್ಗೆ ಗಮನ ಹರಿಸಬೇಕಾಗಿರುವುದು ಇಂದಿನ ಪ್ರಮುಖ ಅನಿವಾರ್ಯತೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.
ಕನಿಷ್ಠಪಕ್ಷ ಸರಕಾರದ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯತ್ವವೂ ದಕ್ಕಿಲ್ಲ ಎಂದು ವಿಷಾದಿಸಿದ ಎ.ಅಹ್ಮದ್‌ಹಾಜಿ, ಪಕ್ಷದ ಬೆನ್ನೆಲುಬಾಗಿರುವ ಅಲ್ಪಸಂಖ್ಯಾತರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದರೆ ಮುಂದೊಂದು ದಿನ ತಾಳ್ಮೆಯ ಕಟ್ಟೆ ಸ್ಫೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಕೆ. ಇಬ್ರಾಹೀಂ (ಉಮ್ಣಿ), ತಾಪಂ ಮಾಜಿ ಸದಸ್ಯ ಎಂ.ವೈ. ಅಲಿ, ಕೊಟ್ಟಮುಡಿಯ ಎಚ್.ಎ. ಹಂಝ, ಬೇಟೋಳಿಯ ಮಂಡೇಂಡ ಎ. ಮೊಯ್ದು, ಚಾಮಿಯಾಲದ ಪುದಿಯತಂಡ ಎಚ್. ಶಂಸುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News