ಎತ್ತಿನಹೊಳೆ ಯೋಜನೆಗೆ 2500 ಕೋಟಿ ರೂ ವ್ಯಯ: ಸಿ.ಎಂ.ಸಿದ್ದರಾಮಯ್ಯ
ತುಮಕೂರು,ಡಿ.10: ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 527 ಕೆರೆಗಳಿಗೆ ಕುಡಿಯಲು ನೀರು ತುಂಬಿಸುವ ಎತ್ತಿನ ಹೊಳೆ ಯೋಜನೆಗೆ ಇದುವರೆಗೂ 2500 ಕೋಟಿ ರೂ ವ್ಯಯವಾಗಿದ್ದು, ಮುಂದಿನ ಮಾರ್ಚ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಧುಗಿರಿಯಲ್ಲಿಂದು ನಡೆದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಪುರಸಭೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಿಸಲು ಸರಕಾರ ಬದ್ಧವಾಗಿದ್ದು, ಇದಕ್ಕಾಗಿ 14 ಸಾವಿರ ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದೆ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ ಎಂದು ಹೇಳಿದರು.
ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ನಮ್ಮ ಸರಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರೇ ನಮ್ಮ ಸರಕಾರವನ್ನು ಭ್ರಷ್ಟಾಚಾರ ರಹಿತ ಸರಕಾರ ಎಂದು ಹೇಳಿದ್ದಾರೆ. ಅವರಿಗಿಂತ ಇನ್ಯಾರು ಭ್ರಷ್ಟಾಚಾರ ರಹಿತ ಸರಕಾರ ಎಂದು ಸರ್ಟಿಫಿಕೇಟ್ ನೀಡಬೇಕು. ಪರಿಶಿಷ್ಟ ಜಾತಿ,ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಬಳಸಬೇಕೆಂಬ ಕಾನೂನು ತಂದಿದ್ದು, ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗಾಗಿ 86 ಸಾವಿರ ಕೋಟಿ ರೂ ಹಣವನ್ನು ವ್ಯಯ ಮಾಡಲಾಗಿದೆ.ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಬಳಸದೇ ನಿರ್ಲಕ್ಷ್ಯಿಸುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಹ ಕಾನೂನು ಜಾರಿಗೆ ತರಲಾಗಿದೆ ಎಂದರು.
ಎಸ್.ಸಿ,ಎಸ್.ಟಿ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡಿದಂತೆ ಮುಂದಿನ ದಿನಗಳಲ್ಲಿ ಇತರೆ ಸಮುದಾಯಗಳ ಕಾಲೋನಿಗಳಲ್ಲಿಯೂ ಸಹ ಕಾಂಕ್ರೀಟ್ ರಸ್ತೆ ಮಾಡಲಾಗುವುದು ಎಂದ ಅವರು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 300 ಇಂದಿರಾ ಕ್ಯಾಂಟಿನ್‍ಗಳನ್ನು ತೆರೆದು ರಾಜ್ಯವನ್ನು ಹಸಿವು ಮುಕ್ತ ರಾಜ್ಯವಾಗಿಸುವ ಕನಸು ಕಾಣುತ್ತಿದೆ. ಕ್ಷೀರಧಾರೆ ಯೋಜನೆ ಮೂಲಕ ರೈತರಿಗೆ ಪ್ರತಿದಿನ 3 ಕೋಟಿ 75 ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ. ಕ್ಷೀರಧಾರೆ ಯೋಜನೆಯಿಂದಾಗಿ 1 ಕೋಟಿ 20 ಲಕ್ಷ ವಿದ್ಯಾರ್ಥಿಗಳಿಗೆ ಹಾಲು, ಮಾತೃಪೂರ್ಣ ಯೋಜನೆಯಡಿ 9.60 ಲಕ್ಷ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಪೂರೈಸಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ 8617 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.
ನಾಡಗೀತೆಯ ಆಶಯಕ್ಕೆ ತಕ್ಕಂತೆ ನಮ್ಮ ಸರಕಾರದ ಯೋಜನೆಗಳಿದ್ದು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದಕ್ಕೆ ಒತ್ತು ನೀಡಲಾಗಿದೆ. ಬುದ್ಧ, ಬಸವಣ್ಣ, ಕನಕದಾಸರು ಹೇಳಿದ್ದಂತೆ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಅಂತರ್ಜಾತಿ ಹಾಗೂ ಸಾಮೂಹಿಕ ವಿವಾಹಗಳು ನಡೆಯಬೇಕು, ಬಡವರು ಆಡಂಬರದಿಂದ ಮದುವೆಗಳನ್ನು ಮಾಡುವುದನ್ನು ಬಿಟ್ಟು, ಸರಳವಾಗಿ ಮದುವೆ ಮಾಡಬೇಕು, ಆಡಂಬರದ ಮದುವೆ ಶ್ರೀಮಂತಿಕೆಯ ಕುರೂಪವೇ ಹೊರತು ಬೇರೆಯೇನಲ್ಲ, ಸರಳವಾಗಿ ಶ್ರೀಮಂತರು ಮದುವೆಯಾದರೆ, ಬಡವರು ಅದನ್ನು ಅನುಕರಿಸುತ್ತಾರೆ ಎಂದರು.
ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅವರು ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಿದಂತೆ ಎಲ್ಲ ಬಿಪಿಎಲ್ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ನೀಡುವಂತೆ ಮಾಡಿದ ಮನವಿಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಎನ್.ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮಧುಗಿರಿ ಕಂದಾಯ ವಿಭಾಗವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಹಾಗೂ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನ ಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ,ಸಾಂಖ್ಯಿಕ ಸಚಿವ ಎಂ.ಆರ್.ಸೀತಾರಾಮ್, ವಿಧಾನಸಭೆ ಉಪಾಧ್ಯಕ್ಷ ಶಿವಶಂಕರರೆಡ್ಡಿ, ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಚಂದ್ರಪ್ಪ, ಶಾಸಕ ಡಾ.ರಫೀಕ್ ಅಹಮದ್, ಜಿ.ಪಂ.ಸದಸ್ಯರಾದ ಕೆಂಚಮಾರಯ್ಯ, ಶಾಂತಲಾ ರಾಜಣ್ಣ, ಜಿ.ಜೆ.ರಾಜಣ್ಣ ಸೇರಿದಂತೆ ತಾಲೂಕು ಪಂಚಾಯತ್, ಪುರಸಭೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ದಿವ್ಯಾ ಗೋಪಿನಾಥ್, ಜಿ.ಪಂ.ಸಿಇಒ ಕೆ.ಜಿ.ಶಾಂತಾರಾಮ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.