×
Ad

ಮೋದಿ ಸರಕಾರದ ವಿಷಯದಲ್ಲಿ ಆಡಳಿತದ ಪರವಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳು: ಅಮೀನ್ ಮಟ್ಟು

Update: 2017-12-10 21:55 IST

ಮೈಸೂರು, ಡಿ.10: ಕರ್ನಾಟಕದ ಮಟ್ಟಿಗೆ ಮಾಧ್ಯಮಗಳು ವಿರೋಧ ಪಕ್ಷವಾಗಿ ಕೆಲಸಮಾಡುತ್ತಿವೆ ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿಷಯದಲ್ಲಿ ಮಾತ್ರ ಆಡಳಿತ ಪರವಾಗಿ ಕೆಲಸ ಮಾಡುತ್ತಿವೆ ಎಂದು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು ಬೇಸರ ವ್ಯಕ್ತಪಡಿಸಿದರು.

`ಆಂದೋಲನ' ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ನೆನಪಿಗಾಗಿ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯಲ್ಲಿರುವ ಮಾನವಿಕ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ``ಪ್ರಜಾಸತ್ತೆ ಉಳಿವು: ಮಾಧ್ಯಮಗಳ ಹೊಣೆಗಾರಿಕೆ'' ಕುರಿತ ವಿಚಾರ ಸಂಕಿರಣದಲ್ಲಿ ``ಜನಪರ ಹಿತಾಸಕ್ತಿಗಳು: ಮಾಧ್ಯಮ ಹೊಣೆಗಾರಿಕೆ'' ವಿಷಯ ಕುರಿತು ಅವರು ಮಾತನಾಡಿದರು.

ಮಾಧ್ಯಮಗಳ ಬಗ್ಗೆ ಜನರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಅವು ಎಚ್ಚೆತ್ತುಕೊಳ್ಳದಿದ್ದರೆ ವಿಶ್ವಾಸಾರ್ಹತೆ ಕಳೆದುಕೊಳ್ಳುವ ಅಪಾಯದಲ್ಲಿವೆ. ಕಸುಬುದಾರಿಕೆ ಪತ್ರಕರ್ತರನ್ನು ಸಹಿಸಿಕೊಳ್ಳುತ್ತಿಲ್ಲ. ಕರ್ನಾಟಕದ ಮಟ್ಟಿಗೆ ಮಾಧ್ಯಮಗಳು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿವೆ ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿಷಯದಲ್ಲಿ ಮಾತ್ರ ಆಡಳಿತ ಪರವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ವಿವಿಧ ಸಾಮಾಜಿಕ ಬೆಳವಣಿಗೆ, ಧಾರ್ಮಿಕ ಸಂಗತಿಗಳ ಬಗ್ಗೆ ಮಾತನಾಡುವ ವಾಹಿನಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಅವ್ಯವಹಾರದ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ, ಮುಖ್ಯಮಂತ್ರಿ ಕಾರಿನ ಮೇಲೆ ಕಾಗೆ ಕುಳಿತರೆ, ಅವರ ಪಂಚೆ ಹರಿದರೆ ಸುದ್ದಿಯಾಗಿಬಿಡುತ್ತದೆ ಎಂದ ಅವರು, ಸಮಾಜದಲ್ಲಿ ಸಜ್ಜನರ ಸಂಖ್ಯೆ ಜಾಸ್ತಿ ಇದೆ. ಆದರೆ, ಅವರು ಮಹಾಮೌನಿಗಳು. ದುರ್ಜನರ ಸಂಖ್ಯೆ ಕಡಿಮೆ ಇದ್ದರೂ ಅವರು ದೊಡ್ಡ ಸದ್ದು ಮಾಡುತ್ತಿದ್ದಾರೆ. ಆ ಭಯದ ಮೂಲಕ ಪ್ರಭುತ್ವವಾದ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

1980ರ ದಶಕದಲ್ಲಿ ಮಾಧ್ಯಮಗಳು ಜನಜಾಗೃತಿಗಾಗಿ ಪರಿಣಾಮಕಾರಿ ಕೆಲಸ ಮಾಡುತ್ತಿದ್ದವು. ಹಾಗಾಗಿಯೇ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಜಾರಿಗೆ ಬಂದಿತ್ತು. ಈಗ ಆಪರೇಷನ್ ಕಮಲದಿಂದ ಪಕ್ಷಾಂತರ ಮಾಡಿದ ವ್ಯಕ್ತಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದರೆ ಆತನನ್ನೇ ಆರಿಸುವಂತಹ ಪರಿಸ್ಥಿತಿ ಉದ್ಭವಿಸಿದೆ. ಇದಕ್ಕೆ ಮಾಧ್ಯಮಗಳ ವೈಫಲ್ಯವೇ ಕಾರಣ ಎಂದರು.

ಮಾಧ್ಯಮಗಳು ಉದ್ಯಮವಾದಾಗ ಸಾಮಾಜಿಕ ಹೊಣೆಗಾರಿಕೆ ಮೊದಲ ಬಲಿಯಾಗುತ್ತದೆ ಎಂದ ಅವರು, ಈಗಿನ ಸಂದರ್ಭದಲ್ಲಿ ಸೋಪು ಮಾರಾಟಗಾರರಿಗೂ ಪತ್ರಿಕೆ ಮಾರುವವರಿಗೂ ವ್ಯತ್ಯಾಸವೇ ಇಲ್ಲವಾಗಿದೆ. ಸೋಪು ಮಾರುವಾತನಿಗೆ ಯಾವುದೇ ಸಾಮಾಜಿ ಹೊಣೆಗಾರಿಕೆ ಇರುವುದಿಲ್ಲ. ಬಹುತೇಕ ಮಾಧ್ಯಮಗಳು ಕೂಡ ಪ್ರಜ್ಞಾಪೂರ್ವಕವಾಗಿ ಜನರ ತೀರ್ಮಾನಗಳನ್ನು ಯಥಾಸ್ಥಿತಿಯಲ್ಲಿ ಉಳಿಸುತ್ತಿಲ್ಲ. ಕಾರಣ ಹಲವಾರು ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಉದ್ಯಮಿಗಳ ಜಾಹೀರಾತುಗಳಿಂದಲೇ ನಡೆಯುತ್ತಿವೆ ಎಂದು ಅವರು ವಿಷಾದಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಕೇವಲ ಮಾಧ್ಯಮ ಮತ್ತು ಸಾಹಿತಿಗಳೇ ಮಾತನಾಡಬೇಕು ಎನ್ನಲಾಗುತ್ತಿದೆ. ಕಲೆ, ನಾಟಕ ಇತ್ಯಾದಿ ಕಲಾವಿದರೂ ಅಭಿಪ್ರಾಯ ವ್ಯಕ್ತಪಡಿಸಬಹುದು. ಪ್ರಜೆಗಳು ನಡೆಸುವ ಮತದಾನ ಕೂಡ ಪ್ರಮುಖ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಅಲ್ಲದೆ, ಉಪವಾಸ, ಸತ್ಯಾಗ್ರಹ, ಹೋರಾಟ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಇತರೇ ಮುಖಗಳಾಗಿವೆ. ನಟ ಪ್ರಕಾಶ್ ರೈ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರೆ, 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಜಾತ್ಯತೀತವಾದವನ್ನು ಬೆಂಬಲಿಸಿದರೆ, ಅವರನ್ನು ಪ್ರಶ್ನಿಸಲಾಗುತ್ತದೆ. ಅದನ್ನು ನೋಡಿಯೂ ಪತ್ರಿಕೆಗಳು, ಸುದ್ದಿ ವಾಹಿನಿಗಳು ತೆಪ್ಪಗಿರಬೇಕಾದ ಸ್ಥಿತಿ ಸೃಷ್ಟಿಯಾಗಿದೆ ಎಂದು ಅಮಿನ್‍ಮಟ್ಟು ಹೇಳಿದರು.

ಪ್ರಗತಿಪರರು, ವಿಚಾರವಾದಿಗಳೂ ಕೂಡ ಮುಕ್ತವಾಗಿ ಚಂಪಾ, ಪ್ರಕಾಶ್ ರೈ ಅವರನ್ನು ಬೆಂಬಲಿಸುತ್ತಿಲ್ಲ. ಅದರಲ್ಲಿಯೂ ವಿರೋಧದಷ್ಟು ದೊಡ್ಡ ಪ್ರಮಾಣದಲ್ಲಂತೂ ಇಲ್ಲವೇ ಇಲ್ಲ ಎಂದರು.

ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡ ಉಳ್ಳವರ ಕೈಯಲ್ಲಿರುವ ದೊಡ್ಡ ಅಸ್ತ್ರವಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಅದಾನಿ, ಅಂಬಾನಿ, ಪ್ರಭಾವಿ ರಾಜಕಾರಣಿಗಳು, ಪ್ರಭುತ್ವವಾದಿಗಳಿಂದ ಮಾಧ್ಯಮಗಳ ಮೂಲಕ ಬಲವಂತ ಜನ ಸಮ್ಮತಿಯ ಉತ್ಪಾದನೆ ಮಾಡಲಾಗುತ್ತಿದೆ. ವಾಸ್ತವಕ್ಕೂ ಬಹುತೇಕ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಚಿತ್ರಕ್ಕೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ತೆರಿಗೆ ವಂಚನೆ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯವಸ್ಥೆಯಡಿ ಹೆಚ್ಚು ಹಣ ವಸೂಲಿ ಮಾಡಿದರೂ ಪ್ರತಿಭಟಿಸುವುದಿಲ್ಲ. ನೋಟು ಅಮಾನ್ಯ ಕ್ರಮಕ್ಕೆ ಸಮೀಕ್ಷೆಯಲ್ಲಿ ಹೆಚ್ಚು ಸಕಾರಾತ್ಮಕ ಅಭಿಪ್ರಾಯ ದೊರಕಿದೆ ಎಂಬ ತಪ್ಪು ಮಾಹಿತಿಗೂ ಪ್ರತಿರೋಧ ಇರುವುದಿಲ್ಲ ಎಂದು ಅವರು ತಿಳಿಸಿದರು.

ಉತ್ತರದಾಯಿತ್ವ ಇಲ್ಲದ ಸಾಮಾಜಿಕ ಜಾಲತಾಣಗಳು: ಸಾಮಾಜಿಕ ಜಾಲತಾಣಗಳಿಗೆ ಉತ್ತರದಾಯಿತ್ವ, ಪಾರದರ್ಶಕತೆ ಇಲ್ಲ. ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಆ ಬಗ್ಗೆ ಎಚ್ಚರಿಕೆ ಅಗತ್ಯ. ಆದರೂ ಕರ್ನಾಟಕ ಜನರು ನಿರಾಶರಾಗಬೇಕಾಗಿಲ್ಲ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಅಚ್ಚೇದಿನ್(ಒಳ್ಳೆಯ ದಿನಗಳು) ಬರುವ ವಿಶ್ವಾಸ ಇದೆ ಎಂದು ಅಮಿನ್‍ಮಟ್ಟು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಔಟ್‍ಲುಕ್ ಮಾಜಿ ಪ್ರಧಾನ ಸಂಪಾದಕ ಕೃಷ್ಣಪ್ರಸಾದ್ ಪ್ರತಿಕ್ರಿಯಿಸಿದರು. ಇದಕ್ಕೂ ಮುಂಚೆ ಪ್ರಜಾಸತ್ತೆ ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವಿರುದ್ಧ ಫ್ಯಾಸಿಸ್ಟ್ ದಮನ ನೀತಿಗಳು ವಿಷಯ ಕುರಿತು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ವಿಚಾರ ಮಂಡನೆ ಮಾಡಿದರು. ಮಂಡ್ಯ ಜಿಲ್ಲೆ ದಲಿತ ಸಂಘಷ ಸಮಿತಿ ಮುಖಂಡ ಪ್ರೊ.ಹುಲ್ಕೆರೆ ಮಹದೇವ್ ಪ್ರತಿಕ್ರಿಯಿಸಿದರು. ರಾಜಶೇಖರ ಕೋಟಿ ಅವರ ಹಿರಿಯ ಪುತ್ರಿ ರಶ್ಮಿ ಕೌಜಲಗಿ ಮಾತನಾಡಿದರು.

ರಾಜಶೇಖರ ಕೋಟಿ ಅವರು ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಿದರು. ಕಸುಬುದಾರಿಕೆ ಮತ್ತು  ಬದ್ಧತೆ ದೃಷ್ಟಿಯಿಂದ ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಿಂತ ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡುವುದನ್ನು ಅವರು `ಆಂದೋಲನ'ದ ವರದಿಗಾರರಿಗೆ ಕಲಿಸಿದ್ದಾರೆ.

-ದಿನೇಶ್ ಅಮಿನ್‍ಮಟ್ಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News