×
Ad

ಕಾರವಾರ: ಬೀಚ್ ಹಾಫ್ ಮ್ಯಾರಥಾನ್‌ಗೆ ಅದ್ದೂರಿ ಚಾಲನೆ

Update: 2017-12-10 22:11 IST

► ಮೂರು ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆ

► ಮ್ಯಾರಥಾನ್‌ಗೆ ನಟಿ ಸಂಜನಾ ಚಾಲನೆ

ಕಾರವಾರ, ಡಿ.10: ಕರಾವಳಿ ಉತ್ಸವದ ಅಂಗವಾಗಿ ಆದಿತ್ಯ ಬಿರ್ಲಾ ಗ್ರಾಸಿಮ್ ಇಂಡಸ್ಟ್ರೀಯ ಪ್ರಾಯೋಜಕತ್ವದಲ್ಲಿ ಕಾರವಾರ ಕಡಲ ತೀರದಲ್ಲಿ ಕರಾವಳಿ ಬೀಚ್ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಸಾವಿರಾರು ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು. ಕನ್ನಡ ಸಿನೆಮಾತಾರೆ ಸಂಜನಾ ಗಿಲ್ರಾಣಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು.

ಆಯೋಜಿಸಲಾಗಿದ್ದ ಮ್ಯಾರಥಾನ್ ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆದವು. ಒಲಿಂಪಿಕ್ಸ್ ಕ್ರೀಡಾಪಟು ಸಹನಾಕುಮಾರಿ 5 ಕಿ.ಮೀ. ಓಟದಲ್ಲಿ ಭಾಗವಹಿಸಿ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು.

21 ಕಿ.ಮೀ., 10 ಕಿ.ಮೀ. ಮತ್ತು 5 ಕಿ.ಮೀ. ದೂರದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 21 ಕಿ.ಮೀ. ಪುರುಷರ ವಿಭಾಗದಲ್ಲಿ ಆಫ್ರಿಕಾ ಮೂಲದ ಜೇಮ್ಸ್ ಎಂನ್ದಿ ಪ್ರಥಮ, ರಾಜೇಶ ಥ್ಯಾಂಕ್‌ಚನ್ ದ್ವಿತೀಯ, ಅನಿಲ್‌ಕುಮಾರ್ ತೃತೀಯ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಆಫ್ರಿಕಾದ ಬ್ರಿಗಿಡ್ ಜೆರೋನಾ ಪ್ರಥಮ, ಮೇಘನಾ ಶೆಟ್ಟಿ ದ್ವಿತೀಯ ಮತ್ತು ಮೇಘಾ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 10 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಲಾಯಿತು.

 10 ಕಿ.ಮೀ. ಪುರುಷರ ವಿಭಾಗದಲ್ಲಿ ಸಿದ್ದಪ್ಪಗುಂಡಗಿ ಪ್ರಥಮ, ಸಂದೀಪ್ ನವಲೇಕರ್ ದ್ವಿತೀಯ ಮತ್ತು ಜಗದೀಶ್ ದಂಬೈ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ತಿಪ್ಪವ್ವ ಸಣ್ಣಕ್ಕಿ ಪ್ರಥಮ, ಕೀನ್ಯಾ ಮೂಲದ ಸಿಸಿಲಾವಾಂಗು ದ್ವಿತೀಯ ಮತ್ತು ಜರ್ಮನಿಯ ಅನ್ನಿಕಾ ಹಾಕ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ 15 ಸಾವಿರ, 10 ಸಾವಿರ ಮತ್ತು 5 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಲಾಯಿತು. 5 ಕಿ.ಮೀ. ಪುರುಷರ ವಿಭಾಗದಲ್ಲಿ ಜಗದೀಶ ಪಿಎಂ. ಪ್ರಥಮ, ಸಂದೀಪ ಎನ್. ದ್ವಿತೀಯ, ಸಾಗರ್ ಬೋರ್ಕರ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಶ್ರುತಿ ಪ್ರಥಮ, ಜ್ಯೋತಿ ದ್ವಿತೀಯ, ಧನ್ಯಾ ತೃತೀಯ ಸ್ಥಾನ ಪಡೆದು, ಕ್ರಮವಾಗಿ 5 ಸಾವಿರ, 3 ಸಾವಿರ ಹಾಗೂ 2 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಪಡೆದರು. ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಒಟ್ಟು 1,200 ಸ್ಪರ್ಧಿಗಳು ತಮ್ಮ ಹೆಸರು ನೋಂದಾಯಿಸಿದ್ದರು. 5 ಕಿ.ಮೀ. ಸ್ಪರ್ಧೆಗೆ 550 ಸ್ಪರ್ಧಿಗಳು, 10 ಕಿ.ಮೀ.ಗೆ 200, 21 ಕಿ.ಮೀ. ಸ್ಪರ್ಧೆಗೆ 150 ಸ್ಪರ್ಧಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಐಎಎಸ್ ಪ್ರೊಬೆಷನರಿ ಅಧಿಕಾರಿ ಕೆ.ಆನಂದ್, ಆದಿತ್ಯ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್‌ನ ವಿಭಾಗೀಯ ಮುಖ್ಯಸ್ಥ ಪಿ.ಬಿ. ದೀಕ್ಷಿತ್ ಮುಂತಾದವರು ಇದ್ದರು.

21 ಕಿ.ಮೀ. ಓಟದಲ್ಲಿ 70ರ ವೃದ್ಧ

ಕಾರವಾರ ಉತ್ಸವ ಅಂಗವಾಗಿ ಕಾರವಾರದಲ್ಲಿ ನಡೆದ ‘ಬೀಚ್ ಹಾಫ್ ಮ್ಯಾರಥಾನ್’ ಸ್ಪರ್ಧೆಯ 21 ಕಿ.ಮೀ. ಓಟದಲ್ಲಿ ಧಾರವಾಡ ಮೂಲದ 70 ವರ್ಷದ ಶಿವಪ್ಪ ಸೆಳಕಿ ಪಾಲ್ಗೊಂಡು ಪ್ರೇಕ್ಷಕರಿಗೆ ಹುಬ್ಬೇರಿಸುವಂತೆ ಮಾಡಿದರು. 21 ಕಿ.ಮೀ. ಓಟವನು್ನ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.

ಕಿಚನ್‌ಕ್ವೀನ್ ಅಡುಗೆ ಸ್ಪರ್ಧೆ

► ರುಚಿ ಹೆಚ್ಚಿಸಿದ ನಳಪಾಕ ಖಾದ್ಯ

► ಸ್ಪರ್ಧೆಯಲ್ಲಿ 31ಜನ ಭಾಗಿ

ಕರಾವಳಿ ಉತ್ಸವದ ಅಂಗವಾಗಿ ರವಿವಾರ ಕಾರವಾರ ಮಾಲಾದೇವಿ ಕ್ರೀಡಾಂಗಣದಲ್ಲಿ ಕಿಚನ್‌ಕ್ವೀನ್ ಅಡುಗೆ ಸ್ಪರ್ಧೆಯು ವಿವಿಧ ಬಗೆಯ ರುಚಿಕರವಾಗಿ ತಯಾರಿಸಿದ ಖಾದ್ಯಗಳಿಂದ ಆಸ್ವಾದಿಸುವಲ್ಲಿ ಜನತೆಯ ಮೆಚ್ಚುಗೆ ಪಡೆದುಕೊಂಡಿತು.

ಕರಾವಳಿ ಉತ್ಸವಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು, ಸ್ಪರ್ಧಿಗಳಾಗಿ ಭಾಗವಹಿಸಲು ವಿಶೇಷ ವೇದಿಕೆಯಾಗಿತ್ತು. ಇಂದು ಸ್ತ್ರೀಯರು ಮನೆಯಲ್ಲಿ ದಿನನಿತ್ಯಯದ ಕಾಯಕಗಳಲ್ಲಿ ಸಮಯದ ಅಭಾವದಿಂದ ರುಚಿಕರವಾದ ಅಡುಗೆ ತಯಾರಿಸಲು ಅಸಹಾಯಕರಾಗುತ್ತಾರೆ. ಕೆಲವು ಬಾರಿ ಬೇಕರಿ, ಹೊಟೇಲ್‌ಗಳಿಂದ ತಂದಂತಹ ತಿಂಡಿ-ತಿನಿಸುಗಳಿಂದ ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವ ಅಂಶಗಳನ್ನು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಆಹಾರ ಪದ್ಧತಿ ವ್ಯವಸ್ಥೆ ವಿರುದ್ಧ ಇಂದು ಕಿಚನ್‌ಕ್ವೀನ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಒಟ್ಟು 31 ಸ್ಪರ್ಧಿಗಳಲ್ಲಿ 10ರಿಂದ 19 ರೀತಿಯ ಖಾದ್ಯಗಳನ್ನು ತಯಾರಿಸಿದ್ದರು. ಮಾಂಸಾಹಾರಿ ಆಯ್ದ ವಿಷಯವಾಗಿ ಮೀನು ಮತ್ತು ಚಿಕನ್ ಹಾಗೂ ಶಾಖಾಹಾರಿಯಾಗಿ ಮಶ್ರೂಂ, ಆಲೂಗಡ್ಡೆಯನ್ನು ಒದಗಿಸಲಾಗಿ, ಅಡುಗೆ ತಯಾರಿಸಲು ಪ್ರತಿ ಸ್ಪರ್ಧಿಗಳಿಗೆ ಎರಡು ಗಂಟೆ ಕಾಲಾವಕಾಶ ನೀಡಲಾಗಿತ್ತು. ಮಾಂಸಾಹಾರಿ ಸ್ಪರ್ಧೆಯಲ್ಲಿ ವಿಜೇತರಾದ ಕಾರವಾರದ ಪ್ರಸಾದ ವಿಠೋಬಾ(ಪ್ರಥಮ), ಜೋಯಿಡಾದ ಮಂದಾ ಬಿ. ಪವಾರ (ದ್ವೀತಿಯ), ಭಟ್ಕಳದ ಸಂದ್ಯಾ ಬಿ. ಗುಣಗಿ (ತೃತೀಯ) ಬಹುಮಾನ ಪಡೆದರು.

ಶಾಖಾಹಾರಿಯಲ್ಲಿ ಗಂಗಾ ಮಹಾಬಳೇಶ್ವರ ಭಟ್(ಶಿರಸಿ-ಪ್ರಥಮ), ಕಾರವಾರದ ಶ್ವೇತಾ ಹೇಮಗಿರಿ (ದ್ವಿತೀಯ), ಯಲ್ಲಾಪುರದ ಗಾಯತ್ರಿ ಗಣಪತಿ ಬಿ.(ತೃತೀಯ) ಬಹುಮಾನಗಳನ್ನು ಪಡೆದರು.

ಈಗಾಗಲೇ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಪ್ರದರ್ಶನ ವೀಕ್ಷಿಸಲು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಜಿಪಂ ಸಿಇಒ ಎಲ್. ಚಂದ್ರಶೇಖರ ನಾಯಕ ಮತ್ತಿತರ ಗಣ್ಯರು ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News