×
Ad

ನಾಳೆ ತೊರೆನೂರಿನಲ್ಲಿ ಕೃಷಿ ಸಾಹಿತ್ಯ ಸಮಾವೇಶ

Update: 2017-12-10 22:23 IST

 ಮಡಿಕೇರಿ, ಡಿ.10: ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲವಾದ ಕೃಷಿ ಕ್ಷೇತ್ರದ ಬಗ್ಗೆ ಉತ್ತೇಜನ ನೀಡುವ ಸಲುವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿ.12ರಂದು ಸೋಮವಾರಪೆೇಟೆ ತಾಲೂಕಿನ ತೊರೆನೂರಿನಲ್ಲಿ ಕೃಷಿ ಸಾಹಿತ್ಯ ಸಮಾವೇಶ ವನ್ನು ಹಮ್ಮಿಕೊಂಡಿರುವುದಾಗಿ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊರೆನೂರು ಪ್ರಾಥಮಿಕ ಶಾಲಾ ಆವರಣದಲ್ಲಿ ಡಿ.12ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಬೆಳಗ್ಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಟಿ.ಎಸ್. ಮಹೇಶ್ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಒಂದು ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪರಿಷತ್ ಧ್ವಜವನ್ನು ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಹಾಗೂ ನಾಡ ಧ್ವಜವನ್ನು ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಆರೋಹಣ ಮಾಡಲಿದ್ದಾರೆ. ಅತಿಥಿಗಳಾಗಿ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ.ಎ. ಆದಂ, ತೊರೆನೂರು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಿನೇಶ್, ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವರಾಜು, ಹಿರಿಯ ಪ್ರಾಥಮಿಕ ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ರವಿಚಂದ್ರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಮಹಿಳೆಯರ ಕ್ರೀಡಾಕೂಟವನ್ನು ತೊರೆನೂರು ಗ್ರಾಪಂ ಉಪಾಧ್ಯಕ್ಷೆ ದಾಕ್ಷಾಯಿಣಿ ಉದ್ಘಾಟಿಸಲಿದ್ದು, ಸದಸ್ಯರಾದ ರೂಪಾ ಹರೀಶ್, ಮಂಗಳಾ ಮಹೇಶ್, ರೂಪಾ ದೇವರಾಜ್, ತಾರಾ ಉದಯ್, ತಾರಾಮಣಿ ತುಂಗರಾಜು, ಭಾಗ್ಯಾ ದೊರೆರಾಜ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಗ್ರಾಮೀಣ ಸೊಗಡಿನ ಅಳಿಗುಳಿಮಣೆ , ಕಟ್ಟೆಮನೆ, ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ, ಹಗ್ಗಜಗ್ಗಾಟ, ಕುಂಟೆಬಿಲ್ಲೆ ಸ್ಪರ್ಧೆ ನಡೆಯಲಿದೆ. ಪುರುಷರಿಗೆ ಲಗೋರಿ, ಬುಗುರಿ, ಸೂರ್ ಚೆಂಡು, ಗಿಲ್ಲಿ ದಾಂಡು, ಉಳುವ ಹಾಡು, ರಾಗಿ ಬೀಸುವ ಹಾಡು, ನಾಟಿ ಹಾಡು, ಭತ್ತ ಕುಟ್ಟುವ ಹಾಡು, ರಂಗಗೀತೆ, ಕೋಲಾಟ ಸ್ಪರ್ಧೆಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್‌ನ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಹಾಗೂ ನಿರ್ದೇಶಕ ಅಶ್ವತ್ಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News