ದೇಶಕಾಯುವ ಸೈನಿಕರಿಗೆ ನಾಮಕಾವಸ್ಥೆಯ ಜೈಕಾರ ಬೇಡ: ಸಾಹಿತಿ ಶಾಂತಿ ಸರೋಜಿನಿ

Update: 2017-12-10 17:03 GMT

ಜಿಲ್ಲಾ ಮಟ್ಟದ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ

ಮೂಡಿಗೆರೆ, ಡಿ.10: ದೇಶಕಾಯುವ ಸೈನಿಕರಿಗೆ ಮೊಸಳೆ ಕಣ್ಣೀರು ಸುರಿಸುವ ಮೂಲಕ ನಾಮಕಾವಸ್ಥೆಯ ಜೈಕಾರ ಹಾಕಿದರೆ ದೇಶದ ಬಗ್ಗೆ ಅಥವಾ ಸೈನಿಕರ ಬಗ್ಗೆ ಕಾಳಜಿ ಉಂಟಾಗಲಾರದು ಎಂದು ಸಾಹಿತಿ ಶಾಂತಿ ಸರೋಜಿನಿ ಅಭಿಪ್ರಾಯಪಟ್ಟಿದ್ದಾರೆ.

ಅವರು ರವಿವಾರ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ಪೀಸ್ ಆ್ಯಂಡ್ ಅವೇರ್‌ನೆಸ್ ಟ್ರಸ್ಟ್‌ನ 3ನೇ ವಾರ್ಷಿಕೋತ್ಸವದಲ್ಲಿ ಎಂ.ಎಸ್.ನಾಗರಾಜ್ ಅವರ ಬಾವತರಂಗ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಇಂದಿನ ಪ್ರಜಾತಾಂತ್ರಿಕ ವ್ಯವಸ್ಥೆಯ ರಾಜಕಾರಣ ಈ ನೆಲದ ಗುಣಕ್ಕೆ ಸರಿಹೊಂದುತ್ತಿಲ್ಲ. ಮತದಾನ ವ್ಯವಸ್ಥೆಯ ರಾಜಕಾರಣ ಬದಲಾಗಬೇಕಿದೆ. ಹಾಗೊಂದು ವೇಳೆ ಬದಲಾವಣೆಯೇ ಸಾಧ್ಯವಿಲ್ಲ ಎನ್ನುವುದಾದರೆ ವ್ಯವಸ್ಥೆಯನ್ನೂ ಸರಿದಾರಿಗೆ ತರಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.

ಸಾಹಿತ್ಯದಲ್ಲಿ ತಾಯ್ತನದ ಜೊತೆಗೆ ಪರಾಮರ್ಶೆಯ ಜೀವಕಳೆಯೂ ತುಂಬಿರಬೇಕು. ಕವಿಯಾದವನಿಗೆ ನೋವಿರುತ್ತದೆ. ಆದರೆ, ಕವಿತೆಗೆ ನೋವೆಂಬುದೇ ಇರುವುದಿಲ್ಲ. ಕವಿತೆಗಳು ಸಮಾಜವನ್ನು ಸಮೃದ್ಧಗೊಳಿಸುತ್ತದೆ. ನೋವನ್ನು ಮರೆಸಿ ನೈಜತೆಯ ನಲಿವನ್ನು ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಗೌಡಹಳ್ಳಿ ಪ್ರಸನ್ನ, ತಾಯಿಯ ಹೊಟ್ಟೆಯಿಂದ ಆಗಷ್ಟೇ ಹುಟ್ಟಿದ ಮಗು ವಿಶ್ವಮಾನವನಾಗಿರುತ್ತದೆ. ನಂತರದ ದಿನಗಳಲ್ಲಿ ಜಾತಿ, ಧರ್ಮವೆಂಬ ಪಿಡುಗನ್ನು ಅಂಟಿಸಿಕೊಂಡಾಗ ಭಾವನೆಗಳು ಸಮಾಜ ಘಾತುಕತನದ ವರೆಗೂ ತೆರಳುತ್ತದೆ. ಅಂತಹ ಭಾವನೆಯುಳ್ಳ ಮಕ್ಕಳನ್ನು ಶಿಕ್ಷಣದ ವ್ಯವಸ್ಥೆಯಲ್ಲಿ ತಿದ್ದುವ ಮೂಲಕ ಪುನಃ ವಿಶ್ವಮಾನವನನ್ನಾಗಿ ರೂಪಿಸಬೇಕು. ಆಗ ಮಾತ್ರ ಶಿಕ್ಷಣಕ್ಕೆ ನೈಜ ರೂಪ ಸಿಗಲಿದೆ ಎಂದು ತಿಳಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News