ರೆತಪರ ಆಡಳಿತ ಜೆಡಿಎಸ್‌ನಿಂದ ಮಾತ್ರ ಸಾಧ್ಯ: ಮಧುಬಂಗಾರಪ್ಪ

Update: 2017-12-10 17:14 GMT

 ರಿಪ್ಪನ್‌ಪೇಟೆ, ಡಿ.10: ಸಂಕಷ್ಟದಲ್ಲಿರುವ ರೈತರನ್ನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರ್ಲಕ್ಷ್ಯಸಿವೆ, ರಾಜ್ಯದಲ್ಲಿ ರೈತಪರವಾದ ಆಡಳಿತ ನೀಡಬೇಕಿದ್ದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಸೊರಬ ಕ್ಷೇತ್ರದ ಶಾಸಕ ಮಧುಬಂಗಾರಪ್ಪಹೇಳಿದ್ದಾರೆ.

ನಾಗರಹಳ್ಳಿಯಲ್ಲಿ ನಡೆದ ಮಂಜುನಾಥಗೌಡ, ಆಲುವಳ್ಳಿ ವೀರೇಶ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ರೈತರಿಗೆ ಅಗತ್ಯವಿರುವ ನೀರಾವರಿ ಹಾಗೂ ಮೂಲಭೂತ ಸೌಕರ್ಯಗಳಿಗೆ ೆಚ್ಚು ಒತ್ತುನೀಡಿದ್ದರು. ಬಂಗಾರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯ ತೀವ್ರಬರಗಾಲ ಎದುರಿಸುತ್ತಿದ್ದರೂ ಬೀಜ ವಿತರಣೆ, ಉಚಿತ ವಿದ್ಯುತ್ ನಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಇಂದಿಗೂ ಜನಸಾಮಾನ್ಯರ ಮನದಲ್ಲಿ ಹಾಸುಹೊಕ್ಕಾಗಿದ್ದಾರೆ ಎಂದರು.

ಇಂತಹ ರೈತಪರ ಆಡಳಿತವನ್ನು ಜೆಡಿಎಸ್ ಪಕ್ಷದಿಂದ ಮಾತ್ರ ಕಾಣಲು ಸಾಧ್ಯವಿದ್ದು, ಮುಂದಿನ ಚುನಾವಣೆಯಲ್ಲಿ ಆರ್.ಎಂ. ಮಂಜುನಾಥಗೌಡರನ್ನು ಗೆಲ್ಲಿಸುವ ಮೂಲಕ ಮೂಲಕ ರಾಜ್ಯದಲ್ಲಿ ಸ್ವಂತಬಲದ ಮೇಲೆ ಸರಕಾರ ರಚನೆಗೆ ಸಹಕರಿಸಬೇಕೆಂದರು. ಶಿವಮೊಗ್ಗ ಜಿಲ್ಲೆ ಹಾಗೂ ಸೊರಬ ಕ್ಷೇತ್ರದ ಸಮಗ್ರ ನೀರಾವರಿ ಹಾಗೂ ರೈತರಿಗೆ ಭೂಮಿಯ ಹಕ್ಕನ್ನು ಒದಗಿಸಲು ಕೈಗೊಂಡಿದ್ದ ಪಾದಯಾತ್ರೆಯನ್ನು ಕೆಲವರು ಟೀಕಿಸುತ್ತಿದ್ದಾರೆ. ನಮಗೆ ಜನಸಾಮಾನ್ಯರ ಅಭ್ಯುದಯ ಮುಖ್ಯವಾಗಿದೆ.

ರಾಜ್ಯ ರಾಜಕೀಯವನ್ನು ಅಪರೇಷನ್ ಕಮಲದ ಮೂಲಕ ಕೀಳುಮಟ್ಟಕ್ಕೆ ತಂದಕೀರ್ತಿ ಯಡಿ ಯೂರಪ್ಪನವರಿಗೆ ಸಲ್ಲುತ್ತದೆ. ನೀರಾವರಿ ಸಚಿವ ರಾಗಿದ್ದಾಗ ಅಪ್ಪನ ಹೆಸರುಳಿಸಲು ಕ್ಷೇತ್ರಕ್ಕಾಗಿ ಏನೂ ಮಾಡದ ನನ್ನ ಅಣ್ಣ ಕುಮಾರಬಂಗಾರಪ್ಪ, ಯಡಿ ಯೂರಪ್ಪನವರ ಜೊತೆ ಸೇರಿರುವುದು ಅವನಿಗೆ ಶಾಪವಾಗಿದೆ. ಬಂಗಾರಪ್ಪನವರಿಗೆ ಕೊನೆಯ ಚುನಾವಣೆಯಲ್ಲಿ ನೀಡಿದ ಸೋಲಿನ ಶಿಕ್ಷೆಯನ್ನು ಯಡಿಯೂರಪ್ಪನವರು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ವಾಟಗೋಡು ಸುರೇಶ, ಎಂ.ಎಂ. ಪರಮೇಶ, ಅಮೀರ್ ಹಂಜ, ದರಲ ಗೋಡು ನಾಗೇಂದ್ರ ಜೋಯ್ಸ, ಶ್ರೀಪತಿರಾವ್, ಎಂ.ವಿ. ಜಯ ರಾಮ, ರಾಘವೇಂದ್ರ , ಗೇರುಗಲ್ಲು ಸತೀಶಭಟ್ಟ, ಸುಮತಿ ಆರ್. ಪೂಜಾರ್, ಧರ್ಮೇಶ,ರಾಜೇಶ್ ಮತ್ತಿತರರಿದ್ದರು.

ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರಲ್ಲಿನ ಆತ್ಮವಿಶ್ವಾಸದ ಕೊರತೆಯಿಂದ ನನಗೆ ಅಲ್ಪಅಂತರದಲ್ಲಿ ಸೋಲಾಗಿತ್ತು. ನಂತರದ ದಿನಗಳಲ್ಲಿ ನನ್ನ ಏಳಿಗೆಯನ್ನು ಸಹಿಸಲಾರದ ಹಾಲಿ-ಮಾಜಿ ಶಾಸಕರು ನನಗೆ ಕಿರುಕುಳವನ್ನು ನೀಡಿದ್ದಾರೆ. ಇದೆಲ್ಲವನ್ನು ಜನರ ಸಹಕಾರದಿಂದ ಎದುರಿಸಿದ ನಾನು ಜನವರಿಯಲ್ಲಿ ತೀರ್ಥಹಳ್ಳಿಯಲ್ಲಿ ಬೃಹತ್ ಸಮಾವೇಶದೊಂದಿಗೆ ಜೆಡಿಎಸ್ ಪಕ್ಷ ಸೇರುವ ಮೂಲಕ ಸ್ಪರ್ಧಿಸುತ್ತಿದ್ದೇನೆ, ನನಗಿಂತ ಮೊದಲು ಹಾಗೂ ಕೊನೆಯಿದ್ದ ಎರಡೂ ನಾಯಕರು ನನ್ನ ಮುಂದೆ ಗೆದ್ದು ತೋರಿಸಲಿ

ಆರ್.ಎಂ. ಮಂಜುನಾಥಗೌಡ

ತೀರ್ಥಹಳ್ಳಿ ಕ್ಷೇತ್ರದಲ್ಲಿ ಜನಪರ ಆಡಳಿತ ನೀಡುವಲ್ಲಿ ಕಿಮ್ಮನೆ ರತ್ನಾಕರ ಹಾಗೂ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆರ್.ಎಂ. ಮಂಜುನಾಥಗೌಡರ ಅಗತ್ಯತೆಯಿದ್ದು, ನಮ್ಮೆಲ್ಲಾ ಬೆಂಬಲಿಗರು ಇನ್ನು ಮುಂದೆ ಆರ್.ಎಂ.ಮಂಜುನಾಥಗೌಡರಿಗೆ ಸಂಪೂರ್ಣಬೆಂಬಲ ನೀಡುತ್ತಿದ್ದೇವೆ ಎಂದು ಸಭೆಯಲ್ಲಿ ಘೋಷಿಸಿದರು.

ವೀರೇಶ ಆಲುವಳ್ಳಿ ತಾಪಂ.ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News