ಶಿವಮೊಗ್ಗ ಆಟೊಗಳಲ್ಲಿ ‘ಡಿಸ್ ಪ್ಲೇ ಕಾರ್ಡ್’ ಕಡ್ಡಾಯ

Update: 2017-12-10 17:18 GMT

ನಿಯಮ ಪಾಲಿಸಲಿವೆ 5ಸಾವಿರ ಆಟೊಗಳು

ಶಿವಮೊಗ್ಗ, ಡಿ. 10: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳಲ್ಲಿ ಚಾಲಕರ ವಿವರಗಳನ್ನೊಳಗೊಂಡ ‘ಡಿಸ್ ಪ್ಲೇ ಕಾರ್ಡ್’ಅಳವಡಿಕೆ ಮಾಡುವುದನ್ನು ಪೊಲೀಸ್ ಇಲಾಖೆ ಕಡ್ಡಾಯಗೊಳಿಸಿದೆ. ರವಿವಾರ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಆಟೋಗಳಲ್ಲಿ ‘ಡಿಸ್ ಪ್ಲೇ ಕಾರ್ಡ್’ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಡಿಸ್ ಪ್ಲೇ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಪ್ರತಿಯೊಂದು ಆಟೋಗಳಲ್ಲಿಯೂ ಅಳವಡಿಕೆ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಗಂಗಾಧರಪ್ಪ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಏನಿದು ಕಾರ್ಡ್?: ಶಿವಮೊಗ್ಗ ನಗರದಲ್ಲಿ ಅಧಿಕೃತ ಹಾಗೂ ಅನಧಿಕೃತ ಸೇರಿದಂತೆ ಒಟ್ಟು ಸುಮಾರು 5000ಕ್ಕೂ ಅಧಿಕ ಪ್ರಯಾಣಿಕ ಆಟೋಗಳು ಸಂಚರಿಸುತ್ತಿವೆ. ಆಟೋಗಳಲ್ಲಿ ಪ್ರಯಾಣಿಸುವ ನಾಗರಿಕರಿಗೆ ಸುರಕ್ಷತೆ ಕಲ್ಪಿಸುವ ಉದ್ದೇಶದಿಂದ ಸಂಚಾರಿ ಠಾಣೆ ಪೊಲೀಸರು ಆಟೋಗಳಲ್ಲಿ ಚಾಲಕರ ಸಮಗ್ರ ವಿವರ ಒಳಗೊಂಡ ‘ಡಿಸ್ ಪ್ಲೇ ಕಾರ್ಡ್’ ಅಳವಡಿಕೆಗೆ ಕ್ರಮಕೈಗೊಂಡಿದ್ದಾರೆ.

ಎಸ್ಪಿ ಅಭಿನವ್ ಖರೆ

► ಪ್ರತೀ ಆಟೊದ ಮಾಹಿತಿ ಸಂಚಾರ ಠಾಣೆಯಲ್ಲಿ ಲಭ್ಯ

ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಆಟೊಗಳು, ಚಾಲಕರ ವಿವರಗಳನ್ನು ಮೊದಲೇ ಸಂಗ್ರಹಿಸಿಟ್ಟು ಕೊಂಡಿರಲಾಗುತ್ತದೆ. ಪ್ರಯಾಣಿಕರು ನೀಡುವ ಮಾಹಿತಿಯ ಆಧಾರದ ಮೇಲೆ ಪರಿಶೀಲನೆ ನಡೆಸಿ, ತ್ವರಿತವಾಗಿ ಚಾಲಕರನ್ನು ಪತ್ತೆ ಹಚ್ಚಲು ಸಹಾಯಕವಾಗುತ್ತದೆ ಎಂದು ಸಂಚಾರ ಪೊಲೀಸರು ಅಭಿಪ್ರಾಯ ಪಡುತ್ತಾರೆ.

ಕಾರ್ಡ್‌ನಲ್ಲಿ ಏನೆಲ್ಲಾ ಇರಲಿದೆ

ಸಂಚಾರಿ ಠಾಣೆ ಪೊಲೀಸರು ಜಾರಿಗೆ ತಂದಿರುವ ನೂತನ ಡಿಸ್ ಪ್ಲೇ ಕಾರ್ಡ್‌ನಲ್ಲಿ ಚಾಲಕನ ಭಾವಚಿತ್ರ, ಹೆಸರು, ಮೊಬೈಲ್ ನಂಬರ್, ವಿಳಾಸ, ಆಟೋದ ನೋಂದಣಿ ಸಂಖ್ಯೆ ಮೊದಲಾದ ವಿವರಗಳಿರುತ್ತವೆ. ಪ್ರಯಾಣಿಕರು ಕುಳಿತುಕೊಳ್ಳುವ ಸೀಟ್‌ನ ಮುಂಭಾಗ ಈ ಕಾರ್ಡ್ ಪ್ರದರ್ಶಿಸಲಾಗುತ್ತದೆ.

ಆಟೋಗಳಲ್ಲಿ ಡಿಸ್ ಪ್ಲೇ ಕಾರ್ಡ್ ಅಳವಡಿಕೆ ಮಾಡುವ ಪೊಲೀಸ್ ಇಲಾಖೆಯ ಕ್ರಮ ಸ್ವಾಗತಾರ್ಹ. ಇದರಿಂದ ತಾವು ಸಂಚರಿಸುತ್ತಿರುವ ಆಟೋಗಳ ಚಾಲಕರ ವಿವರ ಸುಲಭವಾಗಿ ತಿಳಿಯ ಬಹುದಾಗಿದೆ. ಅವರಿಂದ ಏನಾದರೂ ಕಿರಿಕಿರಿಯಾದರೆ ಪೊಲೀಸರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ. ಹಾಗೆಯೇ ಅದರಲ್ಲಿರುವ ಮಾಹಿತಿ ಸಂಗ್ರಹಿಸಿಟ್ಟುಕೊಂಡು ತುರ್ತು, ಅನಿವಾರ್ಯ ಸಂದರ್ಭಗಳಲ್ಲಿ ಚಾಲಕರನ್ನು ಸಂಪರ್ಕಿಸಲು ಸಹಕಾರಿಯಾಗುತ್ತದೆ.

ನಾಗರತ್ನಾ, ಪ್ರಯಾಣಿಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News