ಹೊನ್ನಾವರ: ನಾಳೆಯಿಂದ ಸಹಜ ಸ್ಥಿತಿಗೆ: ಡಿಸಿ ನಕುಲ್

Update: 2017-12-10 17:26 GMT

ಕಾರವಾರ, ಡಿ.10: ಕಳೆದ ನಾಲ್ಕು ದಿನಗಳಿಂದ ಸ್ತಬ್ದವಾಗಿದ್ದ ಗಲಭೆಗ್ರಸ್ತ ಹೊನ್ನಾವರ ಸೋಮವಾರದಿಂದ ಸಹಜ ಸ್ಥಿತಿಗೆ ಮರಳಲಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದ್ದಾರೆ.

ರವಿವಾರ ಜಿಲ್ಲಾ ಪೊಲೀಸ್ ಅಧೀಕ್ಷಕರು, ತಹಶೀಲ್ದಾರ್ ಸಮ್ಮುಖದಲ್ಲಿ ಹೊನ್ನಾವರದ ವಿವಿಧ ಸಂಘ ಸಂಸ್ಥೆಗಳ ಸುಮಾರು 50ಕ್ಕೂ ಹೆಚ್ಚು ಮುಖಂಡರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಸೋಮವಾರದಿಂದ ಪಟ್ಟಣ ಸಹಜ ಸ್ಥಿತಿಗೆ ಮರಳಲಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ಹಾಗೂ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ಮುಂಜಾಗೃತಾ ಕ್ರಮವಾಗಿ ಪಟ್ಟಣಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿಸಲಾಗಿದೆ ಎಂದರು.

ವಿವಾದಿತ ಜಾಗದ ಬಗ್ಗೆ ಸರ್ವೇ ನಡೆಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ, ಊಹಾಪೋಹಗಳಿಗೆ ಆಸ್ಪದ ನೀಡದೆ ಸಹಕರಿಸುವಂತೆ ಸಭೆಯಲ್ಲಿದ್ದ ಮುಖಂಡರಲ್ಲಿ ಮನವಿ ಮಾಡಿದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮಣಿಪಾಲ ಆಸ್ಪತ್ರೆ ಹಾಗೂ ಇನ್ನಿತರ ಮೂಲಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಅಲ್ಲದೆ, ಘಟನೆ ಬಗ್ಗೆ ತನಿಖೆ ತೀವ್ರಗತಿಯಲ್ಲಿ ಸಾಗಿದೆ ಎಂದೂ ಅವರು ತಿಳಿಸಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ವಿನಾಕಾರಣ ಪ್ರಚೋದನಾಕಾರಿ ಮಾಹಿತಿ ರವಾನಿಸುವವರ ವಿರುದ್ಧ ಈಗಾಗಲೇ ತೀವ್ರ ನಿಗಾವಹಿಸಲಾಗಿದೆ. ಈಗಾಗಲೇ ಅಂತಹ ಮಾಹಿತಿ ರವಾನೆ ಮಾಡಿದವರ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಮಾಹಿತಿಗಳ ಸ್ಕ್ರೀನ್‌ಶಾಟ್‌ಗಳನ್ನೂ ಸಂಗ್ರಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಐಪಿಸಿ ಹಾಗೂ ಐಟಿ ಕಾಯ್ದೆಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಫೇಸ್‌ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಪ್ರಚೋದನಾಕಾರಿ ಮಾಹಿತಿ, ಪೋಸ್ಟ್ ಕಂಡು ಬಂದಲ್ಲಿ ಅಂತಹ ಮಾಹಿತಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸ್ ಇಲಾಖೆಯ ಕಂಟ್ರೋಲ್ ರೂಮ್ ಮೊಬೈಲ್ ಸಂಖ್ಯೆ 94808052010 ಹಾಗೂ ಜಿಲ್ಲಾಧಿಕಾರಿ ಕಚೇರಿ ವಾಟ್ಸ್‌ಆ್ಯಪ್ ಕಂಪ್ಲೈಂಟ್ ಮೊಬೈಲ್ ಸಂಖ್ಯೆ 9483511015ಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪಿಎಸೈ ಆನಂದ್ ಮೂರ್ತಿಗೆ ಸಾರ್ವಜನಿಕರ ಶಹಬಾಸ್‌ಗಿರಿ

ಹೊನ್ನಾವರ ಘಟನೆ ನಿಭಾಯಿಸುವಲ್ಲಿ ಸ್ಥಳೀಯ ಪಿಎಸೈ ಆನಂದಮೂರ್ತಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಭೆಯಲ್ಲಿದ್ದ ಮುಖಂಡರು ಶ್ಲಾಘಿಸಿದರು. ಕಳೆದ ನಾಲ್ಕು ದಿನಗಳಿಂದ ಪಟ್ಟಣದಲ್ಲಿ ಶಾಂತಿ ನೆಲೆಸುವಂತೆ ನಾಗರಿಕರೊಂದಿಗೆ ಅವರು ಮಾಡಿಕೊಂಡ ಮನವಿ ಮತ್ತು ಕೈಗೊಂಡ ಕ್ರಮಗಳು, ಕರ್ತವ್ಯ ನಿರ್ವಹಣೆ ನಿಜಕ್ಕೂ ಅಭಿನಂದನೀಯ ಎಂದು ಸಭೆಯಲ್ಲಿ ಪೊಲೀಸ್ ಅಧಿಕಾರಿಯ ಕರ್ತವ್ಯದ ಬಗ್ಗೆ ನಾಗರಿಕರು ಹಾಗೂ ಮುಖಂಡರು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News