ಧರ್ಮವೆಂಬುದು ಮನುಷ್ಯರ ಹೃದಯದಲ್ಲಿದೆ: ಅಕ್ಬರ್ ಅಲಿ

Update: 2017-12-10 17:52 GMT

► ಧರ್ಮಗಳು ಕೋಮುವಾದ ಕಲಿಸುವುದಿಲ್ಲ

► ಧರ್ಮಗಳನ್ನು ಅರಿಯದವರಿಂದ ನೈಜ ಧರ್ಮಾನುಯಾಯಿಗಳಿಗೆ ಅಪಾಯ

ವೀರಾಜಪೇಟೆ, ಡಿ.10: ಧರ್ಮವೆಂಬುದು ಮಸೀದಿಗಳಲ್ಲಾಗಲೀ, ದೇವಾಲಯಗಳಲ್ಲಾಗಲೀ, ಇಗರ್ಜಿಗಳಲ್ಲಾಗಲೀ ಇಲ್ಲ. ಅದು ಮನುಷ್ಯನ ಹೃದಯದಲ್ಲಿದೆ. ಪ್ರತಿಯೊಬ್ಬರೂ ಪರಸ್ಪರ ನಂಬಿ ಪ್ರೀತಿಸಿದಲ್ಲಿ ಅದುವೇ ನೈಜ ಧರ್ಮವೆನಿಸುತ್ತದೆ. ಧರ್ಮವೆಂಬುದು ದೇವರಿಗಾಗಿಯಲ್ಲ. ಅದು ಮನುಷ್ಯರಿಗಾಗಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಕ್ಬರ್ ಅಲಿ ಉಡುಪಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಅವರು ಜಮಾಅತೆ ಇಸ್ಲಾಮೀ ಹಿಂದ್ ವಿರಾಜಪೇಟೆ ಸ್ಥಾನೀಯ ಶಾಖೆಯ ಆಶ್ರಯದಲ್ಲಿ ಸ್ಥಳೀಯ ಗಣಪತಿ ಆರ್ಕೇಡ್‌ನಲ್ಲಿ ಏರ್ಪಡಿಸಲಾಗಿದ್ದ ಮಾನವ ಕುಲದ ವಿಮೋಚಕ ಪ್ರವಾದಿ ಮುಹಮ್ಮದ್(ಸ) ಎಂಬ ವಿಷಯದಡಿ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಸಿ ಮಾತನಾಡಿದರು. ಪ್ರವಾದಿಗಳು ಎಂದೂ ಆಧ್ಯಾತ್ಮದ ಹುಡುಕಾಟ ನಡೆಸಿದವರಲ್ಲ. ಬದಲಾಗಿ ಪ್ರವಾದಿತ್ವ ಎಂಬುದು ಸಮಾಜದ ಆಧ್ಯಾತ್ಮದ ಹುಡುಕಾಟಕ್ಕೆ ಇರುವ ದೈವಿಕ ಉತ್ತರವಾಗಿದೆ. ನಮ್ಮದು ಹೇಗೆ ವೈವಿಧ್ಯಮಯವಾದ ಸಮಾಜವೋ ಹಾಗೆಯೇ ವೈರುಧ್ಯತೆಗಳಿಂದ ಕೂಡಿದ ಸಮಾಜವೂ ಆಗಿದೆ. ಧರ್ಮಗಳು ಕೋಮುವಾದವನ್ನು ಕಲಿಸುವುದಿಲ್ಲ. ಧರ್ಮಗಳನ್ನು ಅರಿಯದವರಿಂದಾಗಿ ಇಂದು ನೈಜ ಧರ್ಮಾನುಯಾಯಿಗಳಿಗೆ ಅಪಾಯ ಉಂಟಾಗುತ್ತಿದೆ. ನಾವು ಶಿಕ್ಷಣವನ್ನು ಪಡೆಯುತ್ತಿದ್ದರೂ ಶಿಕ್ಷಿತರಾಗುತ್ತಿಲ್ಲ. ಮಾನವೀಯ ಸಂಬಂಧಗಳು ಮೊಬೈಲ್‌ಗಳಲ್ಲಿ ಮಾತ್ರ ಸೀಮಿತವಾಗುತ್ತಿವೆ. ಬಡ್ಡಿಮುಕ್ತವಾದ, ವ್ಯಭಿಚಾರ ಮುಕ್ತವಾದ, ಶರಾಬು ಮುಕ್ತವಾದ, ಕೋಮುವಾದ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಪ್ರವಾದಿಗಳ ಶಿಕ್ಷಣ ದಾರಿ ದೀಪವಾಗಿದೆ ಎಂದರು.

ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಮುಖ್ಯಸ್ಥರೂ ಧರ್ಮಗುರುಗಳೂ ಆದ ಫಾ. ಮದುಲೈ ಮುತ್ತು ಅವರು ಮಾತನಾಡಿ, ಮನುಷ್ಯ ಕುಲಕ್ಕೆ ಒಳಿತಿನ ಶಿಕ್ಷಣ ನೀಡುವ ಉದ್ದೇಶಕ್ಕಾಗಿ ದೇವರ ಪ್ರವಾದಿಗಳು ಆಗಮಿಸಿದರು. ಎಲ್ಲಾ ಪ್ರವಾದಿಗಳ ಶಿಕ್ಷಣವೂ ಅವರವರ ಕಾಲದಲ್ಲಿ ಎಷ್ಟು ಪ್ರಸಕ್ತವಾಗಿತ್ತೋ ಅಷ್ಟೇ ಪ್ರಸ್ತುತತೆ ಇಂದಿಗೂ ಇದೆ. ಮುಂದಿನ ಪೀಳಿಗೆಗೆ ವೈಷಮ್ಯದ ಮತ್ತು ಹಗೆತನದ ಸಂಸ್ಕೃತಿಯನ್ನು ರವಾನಿಸುವ ಸಮಾಜದಲ್ಲಿ ನಾವು ಇಂದು ಬದುಕುತ್ತಿದ್ದೇವೆ. ಬೆಳೆದು ಬರುವ ಪೀಳಿಗೆಗೆ ಉನ್ನತ ಚಿಂತನೆಗಳು ಹಾಗೂ ವಿಶಾಲ ಮನೋಧರ್ಮದ ಬೋಧನೆಗಳನ್ನು ನೀಡುವುದು ಹಿರಿಯರ ಕರ್ತವ್ಯವಾಗಿದೆ. ಕೆಡುಕುಗಳ ನಿವಾರಣೆಗೆ ಶಿಕ್ಷೆ ಪರಿಹಾರವಲ್ಲ. ಕೆಡುಕಿನ ಮೂಲಗಳನ್ನು ತೊಡೆದು ಹಾಕುವುದು ಶಾಶ್ವತ ಪರಿಹಾರವಾಗಿದೆ ಎಂದರು.

ಸ್ಥಾನೀಯ ಸಂಚಾಲಕ ಕೆ.ಪಿ.ಕೆ. ಮುಹಮ್ಮದ್ ವೇದಿಕೆಯಲ್ಲಿದ್ದರು. ಇ.ಎಂ. ಸಿರಾಜ್ ಖಿರಾಅತ್ ಪಠಿಸಿದರು. ಆರ್.ಕೆ. ತಾಹಾ ಅಹಮದ್ ಸ್ವಾಗತಿಸಿದರು. ಪಿ.ಕೆ. ಅಬ್ದುಲ್ ರೆಹೆಮಾನ್ ವಿಷಯ ಮಂಡಿಸಿದರು. ಕೆ.ಟಿ. ಬಷೀರ್ ಧನ್ಯವಾದವಿತ್ತರು. ಕೆ.ವಿ. ಸುನಿಲ್ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News