ಇತರರಿಗೆ ಕೆಡುಕು ಬಯಸದೆ ಬದುಕುವುದು ಧರ್ಮ: ಗಿರಿಜಾಶಂಕರ್ ಜೋಷಿ

Update: 2017-12-10 17:55 GMT

ಕಳಸ, ಡಿ.10: ಬೇರೆಯವರಿಗೆ ಕೆಡಕನ್ನು ಬಯಸದೆ ಇರುವುದೇ ಧರ್ಮ. ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಾಗಿ ಬೇಟಿ ಕೊಟ್ಟಾಗ ನಮ್ಮಲ್ಲಿ ಒಳ್ಳೆತನವನ್ನು ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೊರನಾಡಿನ ಗಿರಿಜಾಶಂಕರ್ ಜೋಷಿ ಹೇಳಿದ್ದಾರೆ.

ಅವರು ರವಿವಾರ ಪಟ್ಟಣದ ರಹ್‌ಮಾನಿಯ ಜುಮ್ಮಾ ಮಸೀದಿ, ಸಂಸೆಯಲ್ಲಿ ಮೀಲಾದ್ ದಿನಾಚರಣೆಯ ಅಂಗವಾಗಿ ಆಯೋಜಿದ್ದ ಸೌಹಾರ್ದ ಸಮ್ಮೇಳನದಲ್ಲಿ ಮಾತನಾಡಿ, ದೇವರಿದ್ದಾನೆ ಅನ್ನುವುದು ನಂಬಿಕೆಯ ತಳಹದಿಯ ಮೇಲೆ ನಿಂತಿದೆ. ಆಯಾಯ ಧರ್ಮದ ಮಹಾತ್ಮರು ಆಯಾಯ ಧರ್ಮ ಅನುಸಾರವಾಗಿ ಆಚಾರ, ವಿಚಾರಗಳನ್ನು ರೂಪಿಸಿದ್ದಾರೆ ಎಂದರು.

ಆದರೆ ಇತ್ತೀಚಿನ ದಿನಗಳಲ್ಲಿ ತನ್ನ ಸ್ವಾರ್ಥಕ್ಕಾಗಿ ಧರ್ಮವನ್ನು ಬೆರೆಸಿ ಧರ್ಮದ ಹೆಸರಿನಲ್ಲಿ ಸೌಹಾರ್ದತೆಗೆ ಧಕ್ಕೆ ಬರುವಂತಹ ಕೆಲಸಗಳು ನಡೆಯುತ್ತಿದೆ. ಅದಕ್ಕಾಗಿ ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಾಗಿ ಸೌಹಾರ್ದ ಕಾರ್ಯಕ್ರಮ ನಡೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆದರೆ ಪರಸ್ಪರ ಸೌಹಾರ್ದತೆಯ ಬೆಳವಣಿಗೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಎಂ.ಜೆ.ಎಂ. ಕೂಳೂರು ಇಲ್ಲಿಯ ಖತೀಬ ಕೆ.ಎ. ಬಶೀರ್ ಮದನಿ ಅಲ್ ಕಾಮಿಲ್ ಮಾತನಾಡಿ, ಕೋಮುವಾದ, ಭಯೋತ್ಪಾದನೆಗೆ ಇಳಿದು ಯಾರು ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡುತ್ತಾನೋ ಅವನು ಖಂಡಿತಾ ಮುಸ್ಲಿಂ ಆಗಲಾರ. ಇಸ್ಲಾಂ ಧರ್ಮ ಯಾರನ್ನೂ ದ್ವೇಶಿಸಲು ಹೇಳೋದಿಲ್ಲ. ಎಲ್ಲರನ್ನೂ ಪ್ರೀತಿ, ವಿಶ್ವಾಸ, ಸ್ನೇಹದಿಂದ ನೋಡಿಕೊಂಡು ಮಾನವೀಯ ವೌಲ್ಯದೊಂದಿಗೆ ಬದುಕಲು ತಿಳಿಸುತ್ತದೆ. ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಸಿ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು ಭವ್ಯ ಭಾರತ ಕಟ್ಟಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಬಿಜಪಿ ಹೋಬಳಿ ಅಧ್ಯಕ್ಷ ಗಿರೀಶ್ ಹೆಮ್ಮಕ್ಕಿ ಮಾತನಾಡಿ, ಧರ್ಮದಲ್ಲಿ ಸಮಸ್ಯೆಗಳಿಲ್ಲ. ಆದರೆ ರಾಜಕೀಯದಲ್ಲಿ ಜಾತಿ, ಧರ್ಮವನ್ನು ಬೆರೆಸುತ್ತಿರುವುದರಿಂದ ಸೌಹಾರ್ದತೆಗೆ ತೊಂದರೆಯಾಗುತ್ತಿದೆ. ದೇವರು ಎಲ್ಲರಿಗೂ ಒಂದೇ. ಆದರೆ ಆಚಾರ, ವಿಚಾರಗಳು ಬೇರೆ ಬೇರೆ. ನಾವು ಧರ್ಮದ ವಿರೋಧಿಗಳಾಗಬಾರದು. ಬದಲಾಗಿ ನಮ್ಮ ಧರ್ಮವನ್ನು ಪ್ರೀತಿಸಿ ಇನ್ನೊಂದು ಧರ್ಮವನ್ನು ಗೌರವಿಸುವಂತರಾದರೆ ಮಾತ್ರ ನಮ್ಮ ದೇಶವನ್ನು ಸೌಹಾರ್ದತೆಯಿಂದ ಕಾಣಲು ಸಾಧ್ಯವಾಗುತ್ತದೆ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಡಿ. ಜ್ವಾಲನಯ್ಯ ಮಾತನಾಡಿ, ಅಣ್ಣ-ತಮ್ಮಂದಿರಂತೆ ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿರುವ ಈ ಭಾಗದ ಜನರು ರಾಷ್ಟ್ರ ಮಟ್ಟಕ್ಕೆ ಒಂದು ಪಾಠವಾಗಬೇಕಾಗಿದೆ. ಇಂತಹ ಹಳ್ಳಿಯ ಸೌಹಾರ್ದತೆ ಪ್ರತಿಯೊಂದು ಭಾಗದ ಜನರು ಅಳವಡಿಕೊಂಡರೆ ಜಾತಿ, ಕೋಮು ಸಂಘರ್ಷ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಅಸ್ಸಯ್ಯದ್ ಝ್ಯನುಲ್ ಆಬಿದಿನ್ ಜಮಾಲುಲ್ಲೈಲಿ ತಂಙಲ್ ಕಾಜೂರು ಇವರು ದುಆ ಮತ್ತು ಆಶಿರ್ವಚನ ನೀಡಿದರು. ಕಾರ್ಯಕ್ರಮದ ಮುಂಚಿತವಾಗಿ ಮೀಲಾದ್ ರ್ಯಾಲಿ ನಡೆಯಿತು.

ರಹ್‌ಮಾನಿಯ ಜುಮ್ಮಾ ಮಸೀದಿ ಸಂಸೆಯ ಆಡಳಿತ ಸಮಿತಿಯ ಅಧ್ಯಕ್ಷ ಬದ್ರುದ್ದೀನ್, ಖತೀಬ ಕೆ.ಎ. ಶಂಸುದ್ದೀನ್ ಹಿಮಾಮಿ, ಸಿವಿಲ್ ಇಂಜಿನಿಯರ್ ಜಾನ್ ಪೀಟರ್, ಸಂಸೆ ಗ್ರಾಪಂ ಸದಸ್ಯರಾದ ಮೋಹನ್, ಕೆ.ಜೆ. ಧರಣೇಂದ್ರ, ಪದ್ಮಪ್ರಭಾ ಜೈನ್, ಬಾಳೆಹೊಳೆ ಖತೀಬ ಹಸನ್ ಮುಅಲ್ಲಿಂ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News