ಪಠಾಣ್ ಕೋಟ್ ನ ರಕ್ಷಣಾ ನೆಲೆಗಳಿಗೆ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳನ್ನು ಯಾರು ಆಹ್ವಾನಿಸಿದ್ದು ?

Update: 2017-12-11 05:54 GMT

ಹೊಸದಿಲ್ಲಿ, ಡಿ. 11: ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ಶಾಮೀಲಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. 

‘‘ಪಾಕಿಸ್ತಾನದ ಬಗ್ಗೆ ಭಾರೀ ಪ್ರೀತಿ ಯಾರಿಗಿದೆ ? ಎಂದು ಎಲ್ಲರಿಗೂ ತಿಳಿದಿದೆ. ಉಧಂಪುರ ಹಾಗೂ ಗುರ್ದಾಸಪುರದಲ್ಲಿ ಉಗ್ರ ದಾಳಿಗಳ ನಂತರ ಯಾವುದೇ ಆಹ್ವಾನವಿಲ್ಲದೆಯೇ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರ ಮೊಮ್ಮಗಳ ವಿವಾಹಕ್ಕೆ ಹೋಗಿದ್ದು ಯಾರು ?,’’ ಎಂದು ಕಾಂಗ್ರೆಸ್ ವಕ್ತಾರ ಆರ್ ಎಸ್ ಸುರ್ಜೆವಾಲ ಪ್ರಶ್ನಿಸಿ ಪ್ರಧಾನಿ 2015ರ ಕ್ರಿಸ್ಮಸ್ ಸಂದರ್ಭ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದನ್ನು ಉಲ್ಲೇಖಿಸಿದರು.

‘‘ಪಠಾಣ್ ಕೋಟ್ ನ ರಕ್ಷಣಾ ನೆಲೆಗಳಿಗೆ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳನ್ನು ಯಾರು ಆಹ್ವಾನಿಸಿದ್ದು ? ಆ ಸಂದರ್ಭ ಅಮಿತ್ ಶಾ ಅವರು ಪಾಕಿಸ್ತಾನ ತನ್ನ ನೆಲದ ದಾಳಿಕೋರರ ಪಾತ್ರದ ಬಗ್ಗೆ ನಡೆಸುತ್ತಿರುವ ತನಿಖೆ ಮೇಲೆ ವಿಶ್ವಾಸವಿದೆ ಎಂದಿದ್ದರು. ಹೀಗಿರುವಾಗ ಮೋದೀಜಿ, ನೀವು ನಮ್ಮನ್ನು ದೂಷಿಸುತ್ತಿದ್ದೀರಾ ?’’ ಎಂದು ಸುರ್ಜೆವಾಲ ಪ್ರಶ್ನಿಸಿದರು.

ಕಾಂಗ್ರೆಸ್ ಮತ್ತು ಪಾಕಿಸ್ತಾನದ ಕೆಲ ಶಕ್ತಿಗಳು ಗುಜರಾತ್ ರಾಜ್ಯದಲ್ಲಿ ಬಿಜೆಪಿ ವಿಜಯವನ್ನು ತಡೆಯಲು ಯತ್ನಿಸುತ್ತಿದೆ ಎಂದು ಮೋದಿ ಆರೋಪಿಸಿದ್ದರಲ್ಲದೆ ಕಾಂಗ್ರೆಸ್ ಮತ್ತು ಪಾಕಿಸ್ತಾನದ ಅಧಿಕಾರಿಗಳು ನಡೆಸಿದ ಮೂರು ಗಂಟೆಗಳ ರಹಸ್ಯ ಸಭೆಯ ಬಗ್ಗೆಯೂ ಹೇಳಿಕೊಂಡಿದ್ದರು. ಈ ಸಭೆಯು ಉಚ್ಛಾಟಿತ ನಾಯಕ ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದು ಪಾಕಿಸ್ತಾನ ಹೈಕಮಿಷನರ್, ವಿದೇಶಾಂಗ ಸಚಿವ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದರೆಂದೂ ಪ್ರಧಾನಿ ಆರೋಪಿಸಿದ್ದರು.

ಗುಜರಾತ್ ನಲ್ಲಿ ತಮ್ಮ ಪಕ್ಷ ಕಳಪೆ ನಿರ್ವಹಣೆ ತೋರಬಹುದೆನ್ನುವ ಭಯದಿಂದ ಪ್ರಧಾನಿ ಇಂತಹ ಆರೋಪ ಮಾಡಿದ್ದಾರೆ ಎಂದು ಸುರ್ಜೆವಾಲ ಹೇಳಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News