ಚುನಾವಣೆ ನಂತರ ಮತಯಂತ್ರವನ್ನು ವಾಹನದಲ್ಲೇ ಬಿಟ್ಟು ಹೋದ ಅಧಿಕಾರಿಗಳು

Update: 2017-12-11 09:48 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್,ಡಿ.11 :  ಚುನಾವಣಾ ಅಧಿಕಾರಿಗಳು ಕರ್ತವ್ಯಲೋಪವೆಸಗಿದ ಘಟನೆಯೊಂದು ನರ್ಮದಾ ಜಿಲ್ಲೆಯ ದೆಡಿಯಪಡ ಎಂಬಲ್ಲಿಂದ ವರದಿಯಾಗಿದ್ದು ಶನಿವಾರ ನಡೆದ ಪ್ರಥಮ ಹಂತದ ಚುನಾವಣೆಯ ಬಳಿಕ  ಒಂದು ಹೆಚ್ಚುವರಿ ವಿವಿಪಿಎಟಿ ವಿದ್ಯುನ್ಮಾನ ಮತಯಂತ್ರವನ್ನು ಅಧಿಕಾರಿಗಳು ರಾಜಪಿಪ್ಲಾಗೆ ಮರಳುವ ವೇಳೆ ಖಾಸಗಿ ಜೀಪ್ ಒಂದರಲ್ಲಿಯೇ ಬಾಕಿಯಿರಿಸಿದ ಘಟನೆ ನಡೆದಿದೆ.

ಮೂರು ಪ್ರತ್ಯೇಕ ಬ್ಯಾಗುಗಳಲ್ಲಿದ್ದ ಯಂತ್ರವನ್ನು  ಜೀಪಿನ ಚಾಲಕ ಹಾಗೂ ಕೆಲ ಸ್ಥಳೀಯ ನಾಯಕರು ಗಮನಿಸಿ ಅದನ್ನು ಜಿಲ್ಲಾ ಕೇಂದ್ರವಾದ ರಾಜಪಿಪ್ಲಾಗೆ ರವಿವಾರ ಬೆಳಿಗ್ಗೆ  ತಲುಪಿಸಿದ್ದಾರೆ.

ಈ ಘಟನೆ ಸುದ್ದಿಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಆರ್ ಎಸ್ ನಿನಮ, ಅಧಿಕಾರಿಗಳು ಮರೆತುಹೋಗಿದ್ದ ಮತಯಂತ್ರ ``ಹೆಚ್ಚುವರಿ'' ಮತಯಂತ್ರವಾಗಿದ್ದು ಅದನ್ನು ದೆಡಿಯಪಡ ಕ್ಷೇತ್ರದ ಚುನಾವಣೆ ಸಂದರ್ಭ ಉಪಯೋಗಿಸಲಾಗಿಲ್ಲ ಎಂದಿದ್ದಾರೆ,

ದೆಡಿಯಪಡ ತಾಲೂಕಿಗೆ ಕಳುಹಿಸಲಾಗಿದ್ದ ಆರು ಹೆಚ್ಚುವರಿ ಇವಿಎಂಗಳಲ್ಲಿ ಇದು ಒಂದಾಗಿತ್ತು ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಯೇನಾದರೂ ಉದ್ಭವವಾದರೆ ಇವುಗಳನ್ನು ಉಪಯೋಗಿಸಬಹುದಾಗಿದೆ ಎಂದು ಕಳುಹಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ. ಆದರೆ ಉಳಿದ ಮತಯಂತ್ರಗಳನ್ನು ರಾಜಪಿಪ್ಲಾದ ಜಿಲ್ಲಾ ಕೇಂದ್ರಕ್ಕೆ ಅಧಿಕಾರಿಗಳು ಮರಳಿ ನೀಡಿದ್ದರೆ, ಇಂದನ್ನು ಮರೆತು ಬಿಟ್ಟಿದ್ದರು. ಈ ಬಗ್ಗೆ ತಾನು ಈಗಾಗಲೇ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಈ ಮತಯಂತ್ರವನ್ನು ಮತದಾನದ ವೇಳೆ ಉಪಯೋಗಿಸಿಲ್ಲವಾದರೂ  ನಿರ್ಲಕ್ಷ್ಯ ತೋರಿದ್ದಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News