ರಾಷ್ಟ್ರಪತಿ ಅಂಗಳಕ್ಕೆ ‘ಭಡ್ತಿ ಮೀಸಲಾತಿ ವಿಧೇಯಕ’ : ರಾಜ್ಯಪಾಲ ಜತೆ ಮುಖ್ಯಮಂತ್ರಿ ಚರ್ಚೆ
ಬೆಂಗಳೂರು, ಡಿ.11: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಸಂರಕ್ಷಣೆ ವಿಧೇಯಕವನ್ನು ರಾಜ್ಯಪಾಲ ವಿ.ಆರ್.ವಾಲಾ, ರಾಷ್ಟ್ರಪತಿಗೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿ ಜತೆ ರಾಜ್ಯಪಾಲರನ್ನು ಭೇಟಿ ಮಾಡಿ ಭಡ್ತಿ ಮೀಸಲಾತಿ ಕುರಿತ ವಿಧೇಯಕದ ಬಗ್ಗೆ ವಿವರಣೆ ನೀಡಿದ್ದೇವೆ ಎಂದರು.
ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಯು ಭಡ್ತಿಯಲ್ಲಿ ಮೀಸಲಾತಿ ನೀಡುವುದರಿಂದ ಸಮಸ್ಯೆಯಾಗುವುದಿಲ್ಲವೆಂದು ವರದಿ ನೀಡಿತ್ತು. ಹೀಗಾಗಿ, ರಾಜ್ಯ ಸರಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ, ಈ ವಿಚಾರದಲ್ಲಿ ಆತುರಬೇಡ, ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚಿಸಿ ವಿಧೇಯಕ ಅಂಗೀಕರಿಸಿ ಎಂದು ರಾಜ್ಯಪಾಲರು ಸಲಹೆ ನೀಡಿದ್ದರು ಎಂದು ಅವರು ಹೇಳಿದರು.
ಅದರಂತೆ, ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಉಭಯ ಸದನಗಳು ಈ ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದವು. ಆನಂತರ ವಿಧೇಯಕಕ್ಕೆ ಅಂಕಿತ ಹಾಕುವಂತೆ ಕೋರಿ ರಾಜ್ಯಪಾಲರಿಗೆ ಕಳುಹಿಸಿದೆವು. ಇದು, ಕಾನೂನು ವಿಚಾರವಾಗಿರುವುದರಿಂದ ಕಡತವನ್ನು ರಾಷ್ಟ್ರಪತಿಗೆ ಕಳುಹಿಸುವುದಾಗಿ ರಾಜ್ಯಪಾಲರು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಷ್ಟ್ರಪತಿಗೆ ವಿಧೇಯಕವನ್ನು ಕಳುಹಿಸುವ ಬದಲು ನೀವೆ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಲಾಗಿದೆ. ಆದರೂ, ರಾಷ್ಟ್ರಪತಿಗೆ ವಿಧೇಯಕ ಕಳುಹಿಸಿ ಕೊಡುವುದಾಗಿ ಹೇಳಿದ್ದಾರೆ. ವಿಧೇಯಕ ರಾಷ್ಟ್ರಪತಿಗೆ ತಲುಪಿದ ಬಳಿಕ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಉಪ ಕುಲಪತಿ ನೇಮಕ ಕುರಿತು ಚರ್ಚೆ: ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ವಿವಿಗಳ ಉಪ ಕುಲಪತಿಗಳ ನೇಮಕಾತಿ ಕುರಿತು ರಾಜ್ಯಪಾಲರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು.