ಸಿಂಧು, ಶ್ರೀಕಾಂತ್‌ಗೆ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆ

Update: 2017-12-12 18:11 GMT

ದುಬೈ, ಡಿ.12: ಅಗ್ರ ಬ್ಯಾಡ್ಮಿಂಟನ್ ಆಟಗಾರರಾದ ಪಿ.ವಿ. ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಬುಧವಾರ ಆರಂಭವಾಗಲಿರುವ ಒಂದು ಮಿಲಿಯನ್ ಡಾಲರ್ ಬಹುಮಾನ ಮೊತ್ತದ ದುಬೈ ಸೂಪರ್ ಸರಣಿ ಫೈನಲ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಪ್ರತಿಷ್ಠಿತ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನ ವಿಶ್ವದ ಅಗ್ರಮಾನ್ಯ 8 ಆಟಗಾರರು ಮಾತ್ರ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.

 ವಿಶ್ವದ ನಂ.3ನೇ ಆಟಗಾರ್ತಿ ಸಿಂಧು ಹಾಗೂ ವಿಶ್ವದ ನಂ.4ನೇ ಆಟಗಾರ ಶ್ರೀಕಾಂತ್ ಅವರು ಶೇಖ್ ಹಮ್ದನ್ ಒಳಾಂಗಣ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಟೂರ್ನಿಯ ಮೊದಲ ಸುತ್ತಿನಲ್ಲಿ ಕ್ರಮವಾಗಿ ಚೀನಾದ ವಿಶ್ವದ ನಂ.9ನೇ ಆಟಗಾರ್ತಿ ಹಿ ಬಿಂಗ್‌ಜಾವೊ ಹಾಗೂ ಡೆನ್ಮಾರ್ಕ್‌ನ ವಿಶ್ವದ ನಂ.1 ಆಟಗಾರ ವಿಕ್ಟರ್ ಆಕ್ಸೆಲ್‌ಸನ್‌ರನ್ನು ಎದುರಿಸಲಿದ್ದಾರೆ.

ಸಿಂಧು ಹಾಗೂ ಶ್ರೀಕಾಂತ್ ಈ ವರ್ಷ ಯಶಸ್ವಿ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಸಿಂಧು ಇಂಡಿಯಾ ಓಪನ್ ಹಾಗೂ ಕೊರಿಯಾ ಓಪನ್ ಪ್ರಶಸ್ತಿಯಲ್ಲದೆ ಗ್ಲಾಸ್ಗೊ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಹಾಗೂ ಕಳೆದ ತಿಂಗಳು ನಡೆದಿದ್ದ ಹಾಂಕಾಂಗ್ ಓಪನ್‌ನಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಜಯಿಸಿದ್ದರು.

ಮತ್ತೊಂದೆಡೆ, ಶ್ರೀಕಾಂತ್ ಅವರು ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಸೂಪರ್ ಸರಣಿ ಪ್ರಶಸ್ತಿಗಳನ್ನು ಜಯಿಸಿದ ಭಾರತದ ಏಕೈಕ ಹಾಗೂ ವಿಶ್ವದ ನಾಲ್ಕನೇ ಆಟಗಾರನಾಗಿದ್ದಾರೆ.

ಶ್ರೀಕಾಂತ್ ಅವರು ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಚೀನಾ ಹಾಗೂ ಹಾಂಕಾಂಗ್ ಓಪನ್‌ನಿಂದ ದೂರ ಉಳಿದಿದ್ದರು.

ಒಂದು ತಿಂಗಳ ವಿರಾಮದ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಿರುವ ಶ್ರೀಕಾಂತ್ ನಾಲ್ಕು ಪ್ರಶಸ್ತಿ ಜಯಿಸಲು ಮಾಡಿದ್ದ ಮ್ಯಾಜಿಕ್‌ನ್ನು ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ.

‘‘ಇದು ನನಗೆ ಅತ್ಯಂತ ಪ್ರಮುಖ ಟೂರ್ನಿ. 2014 ಹಾಗೂ 2015ರಲ್ಲಿ ಸೆಮಿಫೈನಲ್‌ಗೆ ತಲುಪಿದ್ದೆ. ಲೀಗ್ ಹಂತದಲ್ಲೂ ಮುಗ್ಗರಿಸಿದ್ದೆ. ಆಟಗಾರನಾಗಿ ನಾವು ಇದನ್ನೆಲ್ಲಾ ಮರೆತು ಹೊಸ ಆರಂಭ ಪಡೆಯಬೇಕಾಗಿದೆ. ಈ ವರ್ಷ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೇನೆ’’ ಎಂದು ಶ್ರೀಕಾಂತ್ ಹೇಳಿದ್ದಾರೆ.

  ಶ್ರೀಕಾಂತ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ‘ಬಿ’ ಗುಂಪಿನಲ್ಲಿ ವಿಶ್ವದ ನಂ.7ನೇ ಆಟಗಾರ ಚೌ ಟಿಯೆನ್ ಚೆನ್,ಶಿ ಯುಖಿ(ವಿಶ್ವದ ನಂ.8) ಹಾಗೂ ಆಕ್ಸೆಲ್‌ಸನ್‌ಅವರೊಂದಿಗೆ ಸ್ಥಾನ ಪಡೆದಿದ್ದಾರೆ.

 ಕಳೆದ ಆವೃತ್ತಿಯ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಸಿಂಧು ‘ಎ’ ಗುಂಪಿನಲ್ಲಿ ಜಪಾನ್‌ನ ವಿಶ್ವದ ನಂ.2ನೇ ಆಟಗಾರ ಅಕಾನೆ ಯಮಗುಚಿ ಹಾಗೂ ವಿಶ್ವದ ನಂ.15ನೇ ಆಟಗಾರ ಸಯಾಕೊ ಸಾಟೊ, ಚೀನಾದ ಬಿಂಗ್‌ಜಾವೊರೊಂದಿಗೆ ಸ್ಥಾನ ಪಡೆದಿದ್ದಾರೆ.

‘‘ಈ ವರ್ಷ ನನ್ನ ಪಾಲಿಗೆ ಉತ್ತಮವಾಗಿತ್ತು. ಈ ವರ್ಷವನ್ನು ಪ್ರಶಸ್ತಿಯೊಂದಿಗೆ ಕೊನೆಗೊಳಿಸುವ ನಿರೀಕ್ಷೆಯಲ್ಲಿದ್ದೇನೆ. ದುಬೈ ಸೂಪರ್ ಸರಣಿ ಫೈನಲ್ಸ್‌ನಲ್ಲಿ ಈ ಬಾರಿ ಚೆನ್ನಾಗಿ ಆಡುವೆ’’ ಎಂದು ಹೈದರಾಬಾದ್ ಆಟಗಾರ್ತಿ ಸಿಂಧು ಹೇಳಿದ್ದಾರೆ.

ಮೊದಲ ಸುತ್ತಿನಲ್ಲಿ ಪ್ರತಿ ಗುಂಪಿನ ನಾಲ್ವರು ಆಟಗಾರರು ಮುಖಾಮುಖಿಯಾಗಲಿದ್ದು, ಪ್ರತಿ ಗುಂಪಿನ ಇಬ್ಬರು ಅಗ್ರ ಆಟಗಾರರು ಸೆಮಿ ಫೈನಲ್‌ಗೆ ತೇರ್ಗಡೆಯಾಗಲಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಆಕ್ಸೆಲ್‌ಸೆನ್‌ರನ್ನು ಮಣಿಸಿರುವ ಶ್ರೀಕಾಂತ್ ಸತತ ಮೂರು ಪಂದ್ಯದ ಸೋಲಿನಿಂದ ಹೊರ ಬಂದಿದ್ದರು. ಸಿಂಧು ಅವರು ಚೀನಾದ ಬಿಂಗ್‌ಜಾವೊ ವಿರುದ್ಧ 4-5 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಸಿಂಧು ಸೆಪ್ಟಂಬರ್‌ನಲ್ಲಿ ನಡೆದಿದ್ದ ಕೊರಿಯಾ ಓಪನ್‌ನಲ್ಲಿ ಚೀನಾ ಆಟಗಾರ್ತಿಯನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News