ಅನಂತ್ ಕುಮಾರ್ ಹೆಗಡೆ ಮಾನವ ವಿರೋಧಿ: ಸಿಎಂ ಸಿದ್ದರಾಮಯ್ಯ

Update: 2017-12-13 10:16 GMT

ಬೀದರ್, ಡಿ.13: "ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನನ್ನನ್ನು ರಾಕ್ಷಸ ವಂಶಸ್ಥ ಎಂದಿದ್ದರು. ಆದರೆ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುವವರು ನಿಜವಾದ ರಾಕ್ಷಸ ವಂಶಸ್ಥರು. ಅನಂತ್ ಕುಮಾರ್ ಹೆಗಡೆ ಒಬ್ಬ ಮಾನವ ವಿರೋಧಿ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಅವರು, "ಯಡಿಯೂರಪ್ಪ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಏನೂ ಕೆಲಸ ಮಾಡಿಲ್ಲ ಎನ್ನುತ್ತಿದ್ದಾರೆ. ಇಂದು ನೀರಾವರಿ ಯೋಜನೆಗಳ ಉದ್ಘಾಟನೆ ಕಾರ್ಯ ನಡೆಯುತ್ತಿದೆ. ಎಷ್ಟೋ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾರಂಜಾ ಜಲಾಶಯದ ಆಧುನೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ" ಎಂದರು. 

"ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಅವರ ಸರಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಯಾಕೆ ಹೀಗಾಗಿದೆ ಎಂದು ಜನರಿಗೆ ಕಾರಣ ತಿಳಿಸುತ್ತೀರಾ? ಎಂದು ಯಡಿಯೂರಪ್ಪರನ್ನು ಪ್ರಶ್ನಿಸಿದ ಸಿಎಂ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವರು ಯಡಿಯೂರಪ್ಪನವರು. ಒಬ್ಬ ಸಿಎಂ ಜೈಲಿಗೆ ಹೋದ ಇತಿಹಾಸ ಇರಲಿಲ್ಲ. ಆದರೆ ನಿಮ್ಮ ಸರಕಾರದ ಅವಧಿಯಲ್ಲಿ ಎಷ್ಟು ಮಂದಿ ಜೈಲಿಗೆ ಹೋಗಿಬಂದಿದ್ದಾರೆ. ಸಿದ್ದರಾಮಯ್ಯ ಏನೂ ಕೆಲಸ ಮಾಡಿಲ್ಲ ಎನ್ನಲು ನಿಮಗೆ ಯಾವ ನೈತಿಕತೆ ಇದೆ" ಎಂದು ಪ್ರಶ್ನಿಸಿದರು.

"ಯಡಿಯೂರಪ್ಪ ಸರಕಾರ ಇದ್ದಾಗ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದರು. ಸಾಲಮನ್ನಾ ಮಾಡಿ ಅಂದರೆ ನಾವು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಕೊಂಡಿಲ್ಲ ಎಂದರು. ಆದರೆ ಇವತ್ತು ಸಾಲಮನ್ನಾ ಮಾಡಿ ಅಂತ ನಮಗೆ ಹೇಳುತ್ತಿದ್ದಾರೆ. ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ನಿಮ್ಮದು ಒಂದು ನಾಲಿಗೆನಾ? ಅಥವಾ ಎರಡು ನಾಲಿಗೆನಾ?" ಎಂದು ಸಿಎಂ ಪ್ರಶ್ನಿಸಿದರು.

"ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿದೆ. ಬಿಜೆಪಿಯವರಿಗೆ ನಮ್ಮ ವಿರುದ್ಧ ಮಾತನಾಡಲು ಯಾವ ವಿಚಾರವೂ ಸಿಗುತ್ತಿಲ್ಲ. ಅದಕ್ಕಾಗಿ ಅವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪರಿಗೆ ರಾಜಕೀಯ ಸಂಸ್ಕೃತಿ ಇಲ್ಲ. ಅವರು ಹತಾಷರಾಗಿದ್ದಾರೆ" ಎಂದು ಟೀಕಿಸಿದರು.

"ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಬಸವಜಯಂತಿ ದಿನ. ಬಸವಣ್ಣನವರ ವಿಚಾರದಲ್ಲಿ ನಂಬಿಕೆ ಇಟ್ಟವನು ನಾನು. ಹಣಕಾಸು ಮಂತ್ರಿಯಾಗಿದ್ದ ವೇಳೆ ಕೂಡಲಸಂಗಮದಲ್ಲಿ ಬಸವಣ್ಣನವರ ಸ್ಮಾರಕಕ್ಕೆ ಐವತ್ತು ಕೋಟಿ ರೂ. ಬಿಡುಗಡೆ ಮಾಡಿದ್ದೆ. ಈಗ ಅಕ್ಷರಧಾಮದ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿಯಾಗಲು 250 ಕೋಟಿ ರೂ. ಮೀಸಲಿಡಲಾಗಿದೆ. ಮುಂದಿನ ಬಜೆಟ್ ನಲ್ಲಿ ಅನುಭವ ಮಂಟಪ ದ ಅಭಿವೃದ್ಧಿ ಗೆ ಸಾಕಷ್ಟು ಹಣ ಮೀಸಲಿಡುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದರು.

ಇದೇ ಸಂದರ್ಭ ಬಸವಕಲ್ಯಾಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆ ಮೂಲಕ ಮುಖ್ಯಮಂತ್ರಿಯವರ ಪ್ರವಾಸಕ್ಕೆ ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News