ಕೋಟಿ ವೃಕ್ಷ ಯೋಜನೆ; 1 ಕೋಟಿ ಗಿಡ ನೆಡುವ ಗುರಿ ಸಾಧಿಸಲಿದ್ದೇವೆ: ಪದ್ಮಿನಿ ಪೊನ್ನಪ್ಪ ವಿಶ್ವಾಸ

Update: 2017-12-13 12:13 GMT

ಮಡಿಕೇರಿ,ಡಿ.13:ಕರ್ನಾಟಕ ರಾಜ್ಯದಲ್ಲಿ ಶೇ.33 ರಷ್ಟು ಅರಣ್ಯೀಕರಣ ಮಾಡುವ ಉದ್ದೇಶದ ಹಿನ್ನೆಲೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ‘ಕೋಟಿ ವೃಕ್ಷ ಯೋಜನೆ’ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 1 ಕೋಟಿ ಗಿಡಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ ಎಂದು ನಿಗಮದ ಉಪಾಧ್ಯಕ್ಷರಾದ ಮಾಂಗೇರ ಪದ್ಮಿನಿ ಪೊನ್ನಪ್ಪ ತಿಳಿಸಿದ್ದಾರೆ.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಡೆದ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಗಮದಿಂದ ಮೂರು ವರ್ಷಗಳ ಅವಧಿಯಲ್ಲಿ 7.65 ಕೋಟಿ ಗಿಡಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಅಕೇಶಿಯ-ಯುಕಲಿಪ್ಟಸ್‍ಗೆ ನಿರ್ಬಂಧ
ನಿಗಮದಿಂದ ಹಿಂದೆ ಅಕೇಶಿಯ, ಯುಕಲಿಪ್ಟಸ್ ಮರಗಳನ್ನು ಬೆಳೆಯುವ ಮತ್ತು ಅವುಗಳನ್ನು ಮಾರಾಟಮಾಡಲಾಗುತ್ತಿತ್ತು. ಆದರೆ, ಇವುಗಳನ್ನು ಬೆಳೆಯುವುದರಿಂದ ಅಂತರ್ಜಲಕ್ಕೆ ತೊಂದರೆ ಎದುರಾಗಿ ನೀರಿನ ಸಮಸ್ಯೆ ಎದುರಾಗುತ್ತದೆ ಎನ್ನುವ ಕಾರಣಗಳಿಂದ ಇವುಗಳನ್ನು ಬೆಳೆಯುವುದಕ್ಕೆ ಸರ್ಕಾರ ನಿರ್ಬಂಧ ಹೇರಿ ಸ್ಪಷ್ಟ ಆದೇಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ನಿಗಮದಿಂದ ಬೆಳೆಯಲಾಗಿದ್ದ ಒಂದು ಕೋಟಿ ಅಕೇಶಿಯ ಮತ್ತು ಯುಕಲಿಪ್ಟಸ್ ನರ್ಸರಿಯನ್ನು ನಾಶ ಮಾಡಲಾಯಿತು. ಪ್ರಸ್ತುತ ಸಿಲ್ವರ್ ಓಕ್ ಸೇರಿದಂತೆ ವಿವಿಧ ಗಿಡಗಳನ್ನು ಬೆಳೆದು ವಿತರಿಸುತ್ತಿರುವುದಾಗಿ ಪದ್ಮಿನಿ ಪೊನ್ನಪ್ಪ ಮಾಹಿತಿ ನೀಡಿದರು.

ಅರಣ್ಯೀಕರಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಿಗಮವು ಖಾಸಗಿ ಜಾಗದಲ್ಲಿ ಕೇವಲ ಅರಣ್ಯ ಬೆಳೆಸುವುದಿದ್ದಲ್ಲಿ ಪ್ರತಿ ಗಿಡದ ಪೋಷಣೆಗೆ ವರ್ಷಕ್ಕೆ 100 ರೂ. ಪ್ರೋತ್ಸಾಹ ಧನವನ್ನು ನೀಡುತ್ತದೆ. ಆದರೆ, ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಜನರ ಆಸಕ್ತಿ ಕಡಿಮೆಯೆಂದು  ಪದ್ಮಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದರು.

ನಿಗಮ 153 ಕೋಟಿ ಲಾಭದಲ್ಲಿ-ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ 153 ಕೋಟಿ ಲಾಭದಲ್ಲಿದೆ. 2014-15 ಮತ್ತು 2015-16ನೇ ಸಾಲಿನಲ್ಲಿ ನಿಗಮದಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 100 ಕೋಟಿಯನ್ನು ಒದಗಿಸಿರುವುದಾಗಿ ಮಾಹಿತಿ ನೀಡಿದರು.

800 ಗ್ಯಾಸ್ ಸಿಲಿಂಡರ್ ವಿತರಣೆ
ನಿಗಮದ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‍ಆರ್)ಯಡಿ ಜಿಲ್ಲೆಯ 800 ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು ಒಲೆಯನ್ನು ಮುಂದಿನ ಜನವರಿ 10ರ  ಒಳಗಾಗಿ ವಿತರಿಸಲಾಗುತ್ತದೆ. 
ಇದರೊಂದಿಗೆ ಸಚಿವೆ ಉಮಾಶ್ರೀ ಅವರ ಸಹಕಾರದೊಂದಿಗೆ ಜನವರಿ ಕೊನೆಯಲ್ಲಿ ವಿಧವೆಯರು ಮತ್ತು ವಿವಾಹವಾಗದಿರುವ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ 500 ಹೊಲಿಗೆ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದರು. 

1500 ಸೋಲಾರ್ ಲೈಟ್ ವಿತರಣೆ

ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ‘ಸ್ಪ್ರೆಡ್ಡಿಂಗ್ ಹ್ಯಾಪಿನೆಸ್ ಫೌಂಡೇಷನ್’ ಸಹಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಗಿರಿಜನ ಹಾಡಿಗಳಿಗೆ ಸಂಬಂಧಿಸಿದ 1500 ಫಲಾನುಭವಿಗಳಿಗೆ ಸೋಲಾರ್ ದೀಪವನ್ನು ಡಿಸೆಂಬರ್ 15 ರಂದು ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುತ್ತದೆ. ಸಮಾರಂಭದಲ್ಲಿ ಅರಣ್ಯ ಇಲಾಖಾ ಸಚಿವರಾದ ರಮಾನಾಥ ರೈ, ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸೋಲಾರ್ ದೀಪ ವಿತರಿಸುವ ಯೋಜನೆಯಡಿ  5 ಸಾವಿರಕ್ಕು ಹೆಚ್ಚಿನ ಅರ್ಜಿಗಳಿದ್ದು, ಫೌಂಡೇಷನ್ ಸಹಕಾರದೊಂದಿಗೆ ಮುಂದಿನ ಮೂರುವರ್ಷಗಳಲ್ಲಿ ಹಂತ ಹಂತವಾಗಿ ಇದನ್ನು ಒದಗಿಸಲಾಗುತ್ತದೆಂದು ಪದ್ಮಿನಿ ಪೊನ್ನಪ್ಪ ತಿಳಿಸಿದರು.

ಜಿಲ್ಲೆಯ ಸಿ ಮತ್ತು ಡಿ ದರ್ಜೆಯ ಭೂಮಿಯಲ್ಲಿ ಸಾಕಷ್ಟು ವರ್ಷಗಳಿಂದ ನೆಲೆಸಿರುವವರಿಗೆ ಹಕ್ಕುಪತ್ರ ದೊರಕಿಸಿಕೊಡುವಲ್ಲಿ ತಾನು ಯಶಸ್ತಿಯಾಗಿರುವುದು ತೃಪ್ತಿ ತಂದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಸಿ ಮತ್ತು ಡಿ ದರ್ಜೆಯ ಭೂಮಿ ಅರಣ್ಯ ಇಲಾಖೆಗೆ ಒಳಪಟ್ಟಿದೆ ಎನ್ನುವ ಕಾರಣಗಳಿಂದ ಹಕ್ಕುಪತ್ರಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಆದರೆ, ಈ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತಂದ ಬಳಿಕ ಅವರು ಎರಡು ತಿಂಗಳ ಕಾಲಾವಕಾಶದಲ್ಲಿ ಅರಣ್ಯ ಇಲಾಖೆಯ ವಶದಲ್ಲಿದ್ದ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವುದರೊಂದಿಗೆ ಒತ್ತುವರಿ ಮಾಡಿಕೊಂಡವರಿಗೆ  ಹಕ್ಕುಪತ್ರವನ್ನು ನೀಡಲು ಸಾಧ್ಯವಾಗಿದೆ ಎಂದು ಪದ್ಮಿನಿ ಪೊನ್ನಪ್ಪ ಹೇಳಿದರು.
ಸಂವಾದದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಮಂಜು ಉಪಸ್ಥಿತರಿದ್ದರು. ಲೋಕೇಶ್ ಸಾಗರ್ ಪ್ರಾರ್ಥಿಸಿ, ವಿಘ್ನೇಶ್ ಭೂತನಕಾಡು ಸ್ವಾಗತಿಸಿ, ಆರ್. ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News