ಸೊರಬ : ವಿವಿಧ ಕಾಮಗಾರಿಗಳಿಗೆ ಚಾಲನೆ

Update: 2017-12-13 12:18 GMT

ಸೊರಬ,ಡಿ.13: ತಾಲ್ಲೂಕಿನ ಅಭಿವೃದ್ಧಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷದ ಶಾಸಕನಾಗಿದ್ದರೂ ಮಂತ್ರಿಗಳ ಮನೆ ಬಾಗಿಲಿಗೆ ಓಡಾಡಿ ಅನುದಾನ ತಂದಿದ್ದೇನೆ, ವಿರೋಧ ಪಕ್ಷದವರು ಚರ್ಚೆಗೆ ಬರುವುದಾದರೆ ತಾಲ್ಲೂಕಿನ ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಅಂದವಳ್ಳಿ ಗ್ರಾಮದಲ್ಲಿ ರೂ. 50ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಹಾಗೂ ರೂ19ಲಕ್ಷ ವೆಚ್ಚದ ಕುಡಿಯುವ ನೀರಿನ ಮೇಲ್ಮಟ್ಟದ ಜಲಗಾರ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿರೋಧಿಗಳು ತಾವು ಮಾಡಿರುವ ಅಭಿವೃದ್ಧಿ ಕೆಲಸದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ತಾಲ್ಲೂಕಿನಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಒಪ್ಪಿಕೊಂಡು ಜನರು ಪ್ರತಿಯೊಂದು ಸ್ಥಳೀಯ ಚುನಾವಣೆಗಳಲ್ಲಿ ತಮಗೆ ಬೆಂಬಲ ನೀಡಿದ್ದಾರೆ. ಅದರಿಂದಾಗಿಯೇ ಜಿಲ್ಲಾ ಪಂಚಾಯತ್ ನಲ್ಲಿ ಅಧಿಕ ಸ್ಥಾನ ಇಲ್ಲದಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡು  ಜೆಡಿಎಸ್ ಅಧಿಕಾರ ಹಿಡಿದಿದೆ ಎಂದರು. 

ರಾಜ್ಯದ ಜನರು ಅಧಿಕಾರ ನೀಡಿದಾಗ ದುರುಪಯೋಗಪಡಿಸಿಕೊಂಡ ಬಿಜೆಪಿ ನಾಯಕರು ಈಗ ಪರಿವರ್ತನಾ ರ್ಯಾಲಿ ಮೂಲಕ ವಿಶ್ವಾಸ ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಿಜೆಪಿಯಿಂದ ಯಾವ ಯಾತ್ರೆ ಮಾಡಿದರೂ ಅವರ ಅಧಿಕಾರದ ಆಸೆ ಕೇವಲ ಕನಸು ಮಾತ್ರ ಎಂದ ಅವರು, ಎಚ್.ಡಿ.ಕುಮಾರಸ್ವಾಮಿ ನಾಯತ್ವವನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದು, ಸಮಗ್ರ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವ ಚಿಂತನೆ ರಾಜ್ಯದ ಜನರಿಂದ ಮುಂಬರುವ ಚುನಾವಣೆಯಲ್ಲಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಭೂರಹಿತರಿಗೆ ಭೂಮಿಯ ಹಕ್ಕು ನೀಡುವ ಕನಸನ್ನು ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರು ಹೊಂದಿದ್ದರು. ಅವರ ಚಿಂತನೆಯ ಫಲವಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಪಕ್ಷಭೇದ ಮರೆತು ಹಕ್ಕುಪತ್ರ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ರಾಜೇಶ್ವರಿ ಗಣಪತಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ನಾಗರಾಜ್ ಚಂದ್ರಗುತ್ತಿ, ಲತಾ ಸುರೇಶ್, ಚಂದ್ರಗುತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ, ದೇವೇಂದ್ರಪ್ಪ, ಪ್ರದೀಪ ಅಂದವಳ್ಳಿ, ಎಚ್.ಗಣಪತಿ.ಕೆ.ವಿ.ಗೌಡ್ರು, ಪಿಡಿಒ ಚೂಡಾಮಣಿ ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News