ಕಾಡಾನೆ ಹಾವಳಿ ತಡೆ - ಸಂತಾನ ಹರಣವೇ ಪರಿಹಾರ : ಪದ್ಮಿನಿ ಪೊನ್ನಪ್ಪ ಅಭಿಪ್ರಾಯ

Update: 2017-12-13 12:35 GMT

ಮಡಿಕೇರಿ,ಡಿ.13 :ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಗಜ ಉಪಟಳವನ್ನು ತಡೆಯಲು ‘ಕಾಡಾನೆಗಳ ಸಂತಾನ ಹರಣ’ವೇ ಸೂಕ್ತವಾಗಿದ್ದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಮಾಂಗೇರ ಪದ್ಮಿನಿ ಪೊನ್ನಪ್ಪ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಡೆದ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ 2014-15ನೇ ಸಾಲಿನ ಗಣತಿಯೊಂದರ ಅಂದಾಜಿನಂತೆ 1700 ರಿಂದ 1900 ಕಾಡಾನೆಗಳಿದ್ದವು. ಆದರೆ ಇಂದು ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಇಷ್ಟೊಂದು ಕಾಡಾನೆಗಳಿಗೆ ಅರಣ್ಯ ಪ್ರದೇಶಗಳಲ್ಲಿ ಅಗತ್ಯ ಆಹಾರ ಲಭ್ಯವಿಲ್ಲದೆ ನಾಡಿನತ್ತ ಲಗ್ಗೆ ಇಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ಅರಣ್ಯ ಪ್ರದೇಶಗಳು ತೇಗದ ಮರಗಳಿಂದ ಆವೃತ್ತವಾಗಿರುವುದರಿಂದ ಆಹಾರದ ಕೊರತೆ ಎದುರಾಗಿದ್ದು, ಕಾಡಾನೆಗಳು ಗ್ರಾಮೀಣ ಭಾಗಗಳಿಗೆ ಲಗ್ಗೆ ಇಡುತ್ತಿವೆ. ಪ್ರಸ್ತುತ ಸೌರ ಬೇಲಿ, ರೈಲ್ವೆ ಹಳಿಗಳನ್ನು ಸಮಸ್ಯೆ ಬಗೆಹರಿಕೆಗೆ ಅಳವಡಿಸಲಾಗುತ್ತಿದೆ. ಆದರೆ ಹಸಿವನ್ನು ತಾಳಲಾಗದ ಕಾಡಾನೆಗಳು ಇವುಗಳನ್ನು ದಾಟಿ ಗ್ರಾಮೀಣ ಭಾಗಗಳಿಗೆ ದಾಳಿ ನಡೆಸುತ್ತಿದ್ದು, ವನ್ಯ ಜೀವಿಗಳ ಜೀವನ ಪದ್ಧತಿಯೇ ಬದಲಾಗುತ್ತಿದೆ ಎಂದು ಪದ್ಮಿನಿ ಪೊನ್ನಪ್ಪ ಆತಂಕ ವ್ಯಕ್ತಪಡಿಸಿದರು. 

ಕಾಡಾನೆಗಳ ಹಾವಳಿಯೊಂದಿಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಹುಲಿ ದಾಳಿಯೂ ಕಂಡು ಬಂದಿದ್ದು, ವ್ಯಾಘ್ರ ಸೆರೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News