ಬಿಕ್ಕರಣೆ, ಬೀರ್ಗೂರು ಭಾಗದಲ್ಲಿ ಕಾಡಾನೆ ದಾಳಿ: ಬೆಳೆ ನಾಶ

Update: 2017-12-13 12:41 GMT

ಮೂಡಿಗೆರೆ, ಡಿ.13:ತಾಲೂಕಿನ ಬಿಕ್ಕರಣೆ, ಬೀರ್ಗೂರು ಭಾಗದಲ್ಲಿ ಕಾಡಾನೆ ದಾಳಿಯಿಂದ ಜನರು ಜೀವ ಭಯದಿಂದ ವಾಸ ಮಾಡುವಂತಾಗಿದ್ದು, ಇವುಗಳನ್ನು ಹಾಸನ ಮಾದರಿಯಲ್ಲಿ ಹಿಡಿದು, ಕೂಡಲೇ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. 

ಕಳೆದ 10 ದಿನದಿಂದ ಬೀರ್ಗೂರು ಮತ್ತು ಬಿಕ್ಕರಣೆ ಭಾಗದಲ್ಲಿ ಎರಡು ಕಾಡಾನೆಗಳು ಬೀಡು ಬಿಟ್ಟಿವೆ. ಇವುಗಳು ಪ್ರತಿನಿತ್ಯ ತೋಟದಲ್ಲಿರುವ ಬಾಳೆ, ಬಗುನೆ, ಅಡಿಕೆ, ಹಲಸು ಮುಂತಾದ ಬೆಳೆಗಳನ್ನು ನಾಶ ಮಾಡುತ್ತಿರುವುದರ ಜೊತಗೆ ಬತ್ತದ ಗದ್ದೆಯನ್ನು ಸಂಪೂರ್ಣ ನಾಶಪಡಿಸುತ್ತಿವೆ. 

ಇದರಿಂದ ಈ ಭಾಗದಲ್ಲಿ ಸುಮಾರು 20 ವರ್ಷದಿಂದಲೂ ಸತತ ಪರಿಶ್ರಮದಿಂದ ಮಾಡಿದ ತೋಟ ನಾಶವಾಗುತ್ತಿದೆ. ಈಗಾಗಲೇ ಕಾಡಾನೆಗಳ ದಾಳಿಯಿಂದ ಕೊಯ್ಲಿಗೆ ಬಂದಿರುವ ಕಾಫಿ ಬೀಜಗಳು ನಾಶವಾಗುತ್ತಿದೆ. ಬತ್ತದ ಗದ್ದೆಯಲ್ಲಿ ಕಟಾವಿಗೆ ಬಂದಿರುವ ಬತ್ತದ ಫಸಲು ಪೈರನ್ನು ಎಲ್ಲೆಂದರಲ್ಲಿ ಚಲ್ಲಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕಂಗೆಟ್ಟುಹೋಗಿದ್ದಾರೆ. 

ಬಿಕ್ಕರಣೆ ಗ್ರಾಮದ ಪ್ರವೀಣ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ತೋಟಕ್ಕೆ ಕಾಡಾನೆಗಳು ಸತತವಾಗಿ ದಾಳಿ ಮಾಡಿದ ಪರಿಣಾಮ ಕಾಫಿ ಗಿಡ, ಬಗುನೆ ಮರ ಸೇರಿದಂತೆ ಇತರೇ ಬೆಳೆಗಳು ಕಾಡಾನೆಗಳಿಂದ ನಾಶವಾಗಿದ್ದಲ್ಲದೇ ಗ್ರಾಮಾಸ್ಥರಲ್ಲಿ ಭಯದ ವಾತಾವರಣ ಮೂಡಿದೆ. ಆದ್ದರಿಂದ ಕಾಡಾನೆಗಳಿಂದ ದಾಳಿ ನಡೆಸಿದ ಬೆಳೆಗೆ ಅರಣ್ಯ ಇಲಾಖೆ ಬೆಳೆ ನಾಶ ಪರಿಹಾರದ ಜೊತೆಗೆ ಹಾಸನದ ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುತ್ತಿರುವ ಮಾದರಿಯನ್ನು ಅನುಸರಿಸಿ ಇಲ್ಲಿರುವ ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News