ಶಿವಮೊಗ್ಗ : ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

Update: 2017-12-13 13:30 GMT

ಶಿವಮೊಗ್ಗ, ಡಿ. 13: ಗುಲ್ಬರ್ಗಾ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕ ಇಲಾಖೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಇಬ್ಬರು ಅಧಿಕಾರಿಗಳಿಗೆ ಸೇರಿದ ಶಿವಮೊಗ್ಗ ನಗರದಲ್ಲಿರುವ ನಿವಾಸಗಳ ಮೇಲೆ ಬುಧವಾರ ಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. 

ಗುಲ್ಬರ್ಗಾದ ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಕೆಲಸ ಮಾಡುತ್ತಿರುವ ಮಲ್ಲಪ್ಪರಿಗೆ ಸೇರಿದ ಶರಾವತಿ ನಗರದಲ್ಲಿರುವ ನಿವಾಸ ಹಾಗೂ ಬೆಂಗಳೂರಿನ ಬಿಬಿಎಂಪಿಯಲ್ಲಿ ಸಹಾಯಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿರುವ ತ್ಯಾಗರಾಜ್‍ರವರಿಗೆ ಸೇರಿದ ಸಾಗರ ರಸ್ತೆಯ ಶ್ರೀರಾಂಪುರದಲ್ಲಿರುವ ನಿವಾಸದ ಮೇಲೆ ಈ ದಾಳಿ ನಡೆಸಲಾಗಿದೆ. 

ದಾಳಿಯಲ್ಲಿ ಶಿವಮೊಗ್ಗ ಎ.ಸಿ.ಬಿ. ಡಿವೈಎಸ್‍ಪಿ ಚಂದ್ರಪ್ಪ, ದಾವಣಗೆರೆ, ಚಿತ್ರದುರ್ಗ ಎಸಿಬಿ ಇನ್ಸ್‍ಪೆಕ್ಟರ್‍ಗಳಾದ ಪ್ರಕಾಶ್, ಬಸವರಾಜ್ ಸೇರಿದಂತೆ ಸುಮಾರು 10 ಅಧಿಕ ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು. ಎರಡು ತಂಡಗಳಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸ್ಥಳೀಯ ಎಸಿಬಿ ಮೂಲಗಳು ಮಾಹಿತಿ ನೀಡಿವೆ. 

ಈ ಈಬ್ಬರು ಅಧಿಕಾರಿಗಳ ಶಿವಮೊಗ್ಗದ ಮನೆಗಳ ಮೇಲೆ ನಡೆದ ದಾಳಿಯಲ್ಲಿ ಲಭ್ಯವಾದ ಚರ-ಸ್ಥಿರಾಸ್ತಿಗಳ ವಿವರಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬೆಳಿಗ್ಗೆ ಆರಂಭವಾದ ಪರಿಶೀಲನೆಯೂ ಸಂಜೆಯ ನಂತರವೂ ಮುಂದುವರಿದಿತ್ತು. ಎರಡೂ ಮನೆಗಳಲ್ಲಿ ಕೆಲ ಮಹತ್ವದ ದಾಖಲೆಗಳನ್ನು ಎಸಿಬಿ ತಂಡ ವಶಕ್ಕೆ ಪಡೆದಿದೆ ಎಂದು ಹೇಳಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News