ಶಿಕಾರಿಪುರ : ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ

Update: 2017-12-13 13:46 GMT

ಶಿಕಾರಿಪುರ,ಡಿ.13: ಕಾಡಾನೆ ತಾಲೂಕಿಗೆ ಪ್ರವೇಶಿಸಿದ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಜನತೆಗೆ ಹಾಗೂ ಬೆಳೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಆನೆಯನ್ನು ಸೆರೆಹಿಡಿಯುವ ಬಗ್ಗೆ ಬುಧವಾರ ಶಾಸಕ ಬಿ.ವೈ ರಾಘವೇಂದ್ರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಪರಿಹಾರೋಪಾಯದ ಬಗ್ಗೆ ಚರ್ಚಿಸಿದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಆನೆಯ ಚಲನವಲನ ಕಂಡುಬಂದ ಬಗ್ಗೆ ಗ್ರಾಮಸ್ಥರು ಭಯಬೀತರಾಗಿದ್ದು ಆನೆ ಸಹಿತ ಗ್ರಾಮಸ್ಥರು,ಬೆಳೆ ಹಾನಿಯಾಗದ ರೀತಿಯಲ್ಲಿ ಸೆರೆಹಿಡಿಯಲು ಸೂಚಿಸಿದರು.

ರಾಯದುರ್ಗ,ಚಳ್ಳಕೆರೆ,ಮೊಣಕಾಲ್ಮೂರು ಕಡೆಯಿಂದ ಧಾವಿಸಿದ್ದ 3-4 ಆನೆಗಳ ಹಿಂಡಿನಿಂದ ಪ್ರತ್ಯೇಕಗೊಂಡ ಆನೆಯೊಂದು ಹೊನ್ನಾಳಿ ಗಡಿಭಾಗದಿಂದ ನ್ಯಾಮತಿ,ಬಿದಿರಗೆರೆ,ಕ್ಯಾತಿನಕೊಪ್ಪ, ಮಾದಾಪುರ ಮೂಲಕ ತಾಲೂಕಿನ ಹಾರೋಗೊಪ್ಪ ಬಳಿಯ ಮರಾಠಿ ಕ್ಯಾಂಪ್, ಸಿಡುಗಿನಹಾಳ್ ಮೂಲಕ ಗಂಗವ್ವನ ಸರ ಅರಣ್ಯಕ್ಕೆ ಪ್ರವೇಶಿಸಿದ ಬಗ್ಗೆ ಹೆಜ್ಜೆಗುರುತು ಕಂಡುಬಂದಿರುವುದಾಗಿ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ ಸ್ಪಷ್ಟಪಡಿಸಿದರು.

ಗ್ರಾಮಸ್ಥರು,ಗ್ರಾಮದಿಂದ ಹೊರಭಾಗದಲ್ಲಿ ಆಲೆದಾಡುವ ಆನೆ ಕಂಡುಬಂದಲ್ಲಿ ಕೂಡಲೇ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶಾಸಕ ರಾಘವೇಂದ್ರ ಮಾತನಾಡಿ,ಮೆಕ್ಕೆ ಜೋಳದ ರಾಶಿಯನ್ನು ರೈತರು ಹರಡಿಕೊಂಡಿದ್ದು ಆನೆಯಿಂದ ಬೆಳೆ ಹಾನಿ,ಪ್ರಾಣ ಹಾನಿಯಾಗದಂತೆ ಇಲಾಖೆ ಅಧಿಕಾರಿಗಳು ಶೀಘ್ರ ಸೆರೆಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿ ಕಾರ್ಯಾಚರಣೆಯಲ್ಲಿ ಆನೆಯ ಪ್ರಾಣಕ್ಕೆ ಹಾನಿಯಾಗದಂತೆ ಎಚ್ಚರಿಕೆಯನ್ನು ವಹಿಸುವಂತೆ ತಿಳಿಸಿದರು.

ಸಕ್ರೆಬೈಲಿನ ನುರಿತ ಮಾವುತರು ಹಾಗೂ ಪಳಗಿದ ಆನೆಗಳ ಸಹಕಾರದಿಂದ ಸೆರೆಹಿಡಿಯುವ ಬಗ್ಗೆ ಕೂಡಲೇ ಸ್ಪಷ್ಟವಾದ ನಿರ್ಧಾರವನ್ನು ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ,ಮುಖಂಡ ವಸಂತಗೌಡ, ಸುಕೇಂದ್ರಪ್ಪ, ನಾಗರಾಜಪ್ಪ,ಹಾಲಪ್ಪ,ಚನ್ನವೀರಪ್ಪ,ಸಣ್ಣ ಹನುಮಂತಪ್ಪ,ಶಿವಪ್ಪಯ್ಯ,ನಾಗರಾಜ ಕೊರಲಹಳ್ಳಿ ರೈತ ಮುಖಂಡ ಈಶ್ವರಪ್ಪ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News