ಲಿಂಗ ಅಲ್ಪಸಂಖ್ಯಾತರ ಕಾಯ್ದೆ-2016 ಜಾರಿಗೆ ವಿರೋಧ

Update: 2017-12-13 14:31 GMT

ಬೆಂಗಳೂರು, ಡಿ.13: ಚಳಿಗಾಲ ಅಧಿವೇಶನದಲ್ಲಿ ಲಿಂಗ ಅಲ್ಪಸಂಖ್ಯಾತರ(ಹಕ್ಕುಗಳ ರಕ್ಷಣೆಯ) ಕಾಯ್ದೆ-2016 ಅನ್ನು ಜಾರಿ ಮಾಡಲು ಮುಂದಾಗಿರುವುದಕ್ಕೆ ಲಿಂಗ ಅಲ್ಪಸಂಖ್ಯಾತ ಹಾಗೂ ಅಂತರ್ ಲಿಂಗಿ ಮೈತ್ರಿ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯರಾದ ಸೌಮ್ಯ, ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಕಾಯ್ದೆಯಲ್ಲಿ ಲಿಂಗ ಅಲ್ಪಸಂಖ್ಯಾತ ಹಾಗೂ ಅಂತರ್ ಲಿಂಗಿ ವ್ಯಕ್ತಿಗಳ ಕುರಿತು ಅನುಚಿತ ವ್ಯಾಖ್ಯಾನ ನೀಡಲಾಗಿದೆ. ಅಲ್ಲದೆ, ತಮ್ಮ ಲಿಂಗವನ್ನು ಗುರುತಿಸಿಕೊಳ್ಳುವ ಸ್ವ-ಗುರುತಿಸುವಿಕೆ ಹಕ್ಕನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪರೀಕ್ಷಾ ಸಮಿತಿಗಳು ದೈಹಿಕ ಪರೀಕ್ಷೆಯ ಮುಖಾಂತರ ಲಿಂಗ ಅಲ್ಪಸಂಖ್ಯಾತರು ಎಂದು ದೃಢೀಕರಿಸುತ್ತದೆ ಎಂದು ಹೇಳಿದೆ. ಅಲ್ಲದೆ, ಈ ಕಾಯ್ದೆ ನಮ್ಮ ಭಿಕ್ಷಾಟನೆಯನ್ನು ಅಪರಾಧ ಎಂದು ಪರಿಗಣಿಸಿದೆ ಹಾಗೂ ನಮ್ಮ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಆರೈಕೆಯ ಕುರಿತ ಕ್ರಮಗಳ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ ಎಂದು ಹೇಳಿದರು.

ಈ ಕಾಯ್ದೆಯು ಅತಿ ಕಠಿಣವಾದ, ಹಿಂಸಾತ್ಮಕ ಮತ್ತು ಹಿಮ್ಮೆಟ್ಟಿಸುವ ನಿಬಂಧನೆಯನ್ನು ಒಳಗೊಂಡಿದೆ ಮತ್ತು ವ್ಯಾಪಕವಾದ ಪ್ರತಿರೋಧ ಎದುರಿಸುತ್ತಿದೆ. ಸಮುಯದಾಯದ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ಕೇಂದ್ರ ಸರಕಾರ 2017 ರಲ್ಲಿ ಸ್ಥಾಯಿ ಸಮಿತಿ ರಚಿಸಲಾಗಿತ್ತು. ಅದರ ವರದಿಯಲ್ಲಿ ಸಾಮಾಜಿಕ ನ್ಯಾಯ ಕುರಿತು ಸಚಿವಾಲಯ ನೀಡಿದ ಶಿಫಾರಸ್ಸುಗಳ ಬಗ್ಗೆ ಋಣಾತ್ಮಕ ಪ್ರತಿಕ್ರಿಯೆಗಳನ್ನು ವರದಿಯಲ್ಲಿ ಸೂಚಿಸಿದೆ. ಆದರೆ, ಸ್ಥಾಯಿ ಸಮಿತಿ ವರದಿಯನ್ನು ಕಡೆಗಣಿಸಿ, 2016 ರ ಕಾಯ್ದೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಅವರು ಕಿಡಿಕಾರಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಿನ ಚಳಿಗಾಲ ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿ ಮಾಡಲು ಮುಂದಾಗಬಾರದು. ಒಂದು ವೇಳೆ ಜಾರಿ ಮಾಡಿದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News