ಸಮಾಜ ಅನ್ನದಾತರನ್ನು ಮರೆಯುತ್ತಿದೆ: ಸಂತೋಷ್ ಹೆಗ್ಡೆ

Update: 2017-12-13 14:37 GMT

ಬೆಂಗಳೂರು, ಡಿ.13: ಸಮಾಜ ಅನ್ನದಾತರನ್ನು ಮರೆಯುತ್ತಿದೆ. ರೈತರಿಗೆ ಸಿಗಬೇಕಾದ ಗೌರವ ಹಾಗೂ ಸ್ಥಾನಮಾನ ಸಿಗುತ್ತಿಲ್ಲ ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ವಿ ರೆಸ್ಪೆಕ್ಟ್ ಫಾರ್ಮರ್ಸ್‌ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರೈತಸ್ನೇಹಿ ಯೋಜನೆಯ ಲೋಗೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುತ್ತಿರುವ ಇಂದಿನ ನಮ್ಮ ಸಮಾಜದಲ್ಲಿ ರೈತರನ್ನು ಮರೆಯುತ್ತಿದ್ದೇವೆ. ಆದರೆ, ದಿನದಲ್ಲಿ ಮೊದಲು ಅನ್ನದಾತರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ರೈತರು ಮಧ್ಯವರ್ತಿಗಳ ವಂಚನೆಗೆ ಬಲಿಯಾಗುತ್ತಿದ್ದಾರೆ. ಅವರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಸರಕಾರದಿಂದ ರೈತರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರೈತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಬೆಳೆ ವಿವೆು ನೀಡಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ದುಬಾರಿ ಮದುವೆ ಮಾಡುವುದು ನಮ್ಮ ಗೌರವ, ಘನತೆ ಎತ್ತಿ ತೋರಿಸುತ್ತದೆ ಎಂದು ನಂಬಿದ್ದಾರೆ ಎಂದ ಅವರು, ರೈತರು ತಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಮದುವೆ ಮಾಡಿಕೊಳ್ಳಬೇಕು. ನೀವು ಪಡೆದ ಸಾಲವನ್ನು ಕೃಷಿ ಚಟುವಟಿಕೆಗೆ ಮಾತ್ರ ಬಳಸಬೇಕು. ಆಡಂಬರ ಜೀವನ ನಡೆಸುವುದರ ಬದಲಿಗೆ, ನೆಮ್ಮದಿಯ ಜೀವನ ನಡೆಬೇಕು ಎಂದು ಮನವಿ ಮಾಡಿದರು.

ನಟ ಕಿಚ್ಚ ಸುದೀಪ್ ಮಾತನಾಡಿ, ರೈತರ ಕಷ್ಟ ಏನೆಂದು ನನಗೆ ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲ. ಅವರ ಕಷ್ಟ ಅವರಿಗಷ್ಟೇ ಅರ್ಥವಾಗುತ್ತದೆ. ಆದರೆ, ರೈತನ ಬೆಲೆ ಏನು ಎಂಬುದು ನನಗೆ ಗೊತ್ತಿದೆ. ಹೀಗಾಗಿ, ಟ್ರಸ್ಟ್ ಮೂಲಕ ದುರುಪಯೋಗವಾವುದು ಬೇಡ ಎಂದು ನುಡಿದರು.

ಐಶಾರಾಮಿ ಜೀವನ ಸಲ್ಲ: ರೈತರು ನಾನು ಕಷ್ಟದಲ್ಲಿದ್ದೇನೆ ಸಹಾಯ ಮಾಡಿ ಎಂದು ಕಷ್ಟ ಸುಖ ಹೇಳಿಕೊಳ್ಳುತ್ತಾನೆ ಹೊರತು, ಬದುಕೋಕೆ ಆಗುವುದಿಲ್ಲ ಎಂದು ಹೇಳುವುದಿಲ್ಲ. ಹೀಗಾಗಿ, ರೈತರ ಹೆಸರಿನಲ್ಲಿ ಅನ್ಯಾಯ ಮಾಡುವುದು ಬೇಡ ಹಾಗೂ ಐಶಾರಾಮಿ ಜೀವನ ನಡೆಸುವುದು ಎಷ್ಟು ಸರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಕೆ.ನಾರಾಯಣಗೌಡ, ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ಈ ಅವಧಿಯಲ್ಲಿ ನಾನೇನು ಹೆಚ್ಚು ಸಂಪಾದನೆ ಮಾಡಿಲ್ಲ. ಇನ್ನೂ ದುಡಿಯಲು ಸಮಯವಿದೆ. ಆದರೆ, ಈ ಅವಧಿಯಲ್ಲಿ 3-4 ಕಾರು ಖರೀದಿ ಮಾಡಿದ್ದೇನೆ. ಅದರಲ್ಲಿ ಒಂದನ್ನು ಮಾರಾಟ ಮಾಡಿ, ರೈತರಿಗಾಗಿ ಟ್ರಸ್ಟ್‌ಗೆ ನೀಡುತ್ತೇನೆ.
- ಕಿಚ್ಚ ಸುದೀಪ್, ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News