ಸ್ಮಶಾನಕ್ಕಾಗಿ ಪ್ರತಿಭಟನೆ : 46 ದಿನ ಕಳೆದರೂ ನಿಲ್ಲದ ಹೋರಾಟ

Update: 2017-12-13 15:21 GMT

ಮಡಿಕೇರಿ,ಡಿ.13 :ಪ್ರಬಲರು ಹಾಗೂ ಉಳ್ಳವರು ಈ ಹಿಂದಿನಿಂದಲೂ ದಮನಿತರನ್ನು ಶೋಷಣೆ ಮಾಡುತ್ತಾ ಬಂದಿದ್ದು, ಇದರ ಮುಂದುವರಿದ ಭಾಗವಾಗಿ ಪಾಲೇಮಾಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿರುವ ಸ್ಮಶಾನದ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಯೋಜನೆ ರಚನೆಯಾಗಿದೆ ಎಂದು ಸಾಹಿತಿ ಹಾಗೂ ರಂಗಕರ್ಮಿ ಯೋಗೇಶ್ ಮಾಸ್ಟರ್ ಆರೋಪಿಸಿದ್ದಾರೆ.

ಮೂರ್ನಾಡು ಸಮೀಪದ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡಿನಲ್ಲಿ ಸ್ಮಶಾನ ಜಾಗಕ್ಕಾಗಿ ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮೊಣ್ಣಪ್ಪ ನೇತೃತ್ವದಲ್ಲಿ ಕಳೆದ 46 ದಿನಗಳಿಂದ ಹೋರಾಟ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ವಿವಾದಿತ ಪ್ರದೇಶವನ್ನು ವೀಕ್ಷಿಸಿದ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಂತರ ಮಾತನಾಡಿದ ಯೋಗೇಶ್ ಮಾಸ್ಟರ್, ಈ ಪ್ರದೇಶದಲ್ಲಿ ವಾಸ ಮಾಡುತ್ತಿರುವವರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಆದರೆ ಇದು ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಸ್ಮಶಾನವನ್ನು ನಾಶ ಮಾಡಿ ಕ್ರೀಡಾಂಗಣ ನಿರ್ಮಾಣಕ್ಕೆ ಮುತುವರ್ಜಿ ವಹಿಸಲಾಗಿದೆ ಎಂದು ಆರೋಪಿಸಿದರು.

ಜನ ವಿರೋಧಿ ಹಾಗೂ ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಇದನ್ನು ಖಂಡಿಸುವುದಾಗಿ ಯೋಗೇಶ್ ಮಾಸ್ಟರ್ ತಿಳಿಸಿದರು. ಇದು ಕೇವಲ ಸ್ಮಶಾನಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ, ಬದಲಾಗಿ ಬದುಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಪ್ರಬಲರು ಹಾಗೂ ಉಳ್ಳವರು ದಲಿತ, ದಮನಿತ, ಹಿಂದುಳಿದ ವರ್ಗ ಸೇರಿದಂತೆ ಅಲ್ಪಸಂಖ್ಯಾತರನ್ನು ಶೋಷಣೆ ಮಾಡುತ್ತಿರುವ ಕುರುಹುಗಳು ಇಲ್ಲಿ ಗೋಚರಿಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾಡಳಿತ ವಿವಾದವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾನವ ಹಕ್ಕುಗಳಲ್ಲಿ ಒಂದಾದ ಸ್ಮಶಾನದ ಯಥಾಸ್ಥಿತಿ ಕಾಪಾಡಬೇಕು ಎಂದು ಯೋಗೇಶ್ ಮಾಸ್ಟರ್ ಒತ್ತಾಯಿಸಿದರು. ಜನರ ಬದುಕಿಗಿಂತ ಕ್ರೀಡೆ ದೊಡ್ಡದಲ್ಲ ಎಂದರು.

ಸ್ಥಳದಲ್ಲಿದ್ದ ಎಸ್‍ಡಿಪಿಐ ಜಿಲ್ಲಾಧ್ಯಕ್ಷರಾದ ಅಮೀನ್ ಮೊಹಿಸಿನ್ ಮಾತನಾಡಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಬೆಳಗಾವಿ ಹೋರಾಟ ಸಂದರ್ಭದಲ್ಲಿ ಪಾಲೇಮಾಡು ಸ್ಮಶಾನ ಜಾಗದ ವಿಷಯವನ್ನು ಸರಕಾರದ ಗಮನಕ್ಕೆ ತಂದಿತ್ತು. ಈ ಬಗ್ಗೆ ಸರಕಾರವು ಸ್ಪಂದಿಸಿತ್ತಾದರೂ ಬೇಡಿಕೆ ಇಲ್ಲಿಯವರೆಗೆ ಈಡೇರಿಲ್ಲವೆಂದು ಆರೋಪಿಸಿದರು. ಜಿಲ್ಲಾಡಳಿತ ದುರ್ಬಲರ ಸ್ಮಶಾನದ ಜಾಗವನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಶಾಂತಿಯುತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮೊಣ್ಣಪ್ಪ, ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷೆ ಕುಸುಮಾವತಿ, ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಶೌಕತ್ ಅಲಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಬಶೀರ್, ಪಾಲೇಮಾಡಿನ ಮಹೇಶ್, ಕಿರಣ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News