ಬಂಧಿತ ಮುಸ್ಲಿಮರ ಪರ ವಕಾಲತ್ತಿಗೆ ವಕೀಲರ ನಿರಾಕರಣೆ: ಆರೋಪ

Update: 2017-12-13 16:14 GMT

ಹೊನ್ನಾವರ,  ಡಿ.13: ಹೊನ್ನಾವರ ವೃತ್ತದಲ್ಲಿ ಡಿಸೆಂಬರ್ 6ರಂದು ಆಟೊ ಮತ್ತು ಬೈಕ್ ಢಿಕ್ಕಿಯ ಬಳಿಕ ಸಂಭವಿಸಿದ್ದ ಕೋಮುಘರ್ಷಣೆಗೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಮುಸ್ಲಿಮರ ಪರ ವಕಾಲತ್ತು ನಡೆಸದಂತೆ ಹೊನ್ನಾವರ ವಕೀಲರ ಸಂಘ ನಿರ್ಧರಿಸಿದೆ ಎಂದು ಬಂಧಿತರ ಸಂಬಂಧಿಕರು ಆರೋಪಿಸಿದ್ದಾರೆ.

ಈ ಬಗ್ಗೆ ‘ವಾರ್ತಾ ಭಾರತಿ’ಗೆ ಪ್ರತಿಕ್ರಿಯೆ ನೀಡಿದ ಹೊನ್ನಾವರದ ಸಾಮಾಜಿಕ ಕಾರ್ಯಕರ್ತ ಮೂಸಾ ಅವರು, “ಡಿಸೆಂಬರ್ 6ರಂದು ಅಪಘಾತದ ಬಳಿಕ ಭುಗಿಲೆದ್ದ ಕೋಮುಘರ್ಷಣೆಗೆ ಸಂಬಂಧಿಸಿ ಪೊಲೀಸರು ಡಿಸೆಂಬರ್ 7ರ ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ಮನೆಗಳಿಗೆ ನುಗ್ಗಿ ಮುಸ್ಲಿಮರನ್ನು ಬಂಧಿಸಿದ್ದರು. ಬಂಧಿತರ ಪೈಕಿ 28 ಮಂದಿಯ ಜಾಮೀನು ಅರ್ಜಿಗಾಗಿ ಡಿಸೆಂಬರ್ 7ರಂದು ನಾವು ಹೊನ್ನಾವರದ ವಕೀಲರಾದ ರವಿ ಹೆಗಡೆಯವರನ್ನು ಸಂಪರ್ಕಿಸಿದ್ದೆವು. ಅಂದು ಜಾಮೀನಿಗಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಡಿಸೆಂಬರ್ 8ರಂದು ಕೂಡ ನಾವು ರವಿ ಹೆಗಡೆಯವರ ಸಂಪರ್ಕದಲ್ಲಿದ್ದವು. 9, 10ರಂದು ನ್ಯಾಯಾಲಯಕ್ಕೆ ರಜೆ ಇತ್ತು. 11ರಂದು ರವಿ ಹೆಗಡೆಯವರು, ಮುಸ್ಲಿಮರ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ನಿರ್ಧಾರ ಕೈಗೊಂಡಿದೆ. ಅಲ್ಲದೆ ಜಾಮೀನು ಅರ್ಜಿಯನ್ನು ಹಿಂಪಡೆಯುವಂತೆ ನನಗೆ ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ ಬಂಧಿತರ ಪರ ವಕಾಲತ್ತು ವಹಿಸಲು ಆಗುವುದಿಲ್ಲ" ಎಂದು ಹೇಳಿರುವುದಾಗಿ ಮೂಸಾ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಚರ್ಚಿಸುವುದಿಲ್ಲ

ಈ ಬಗ್ಗೆ ‘ವಾರ್ತಾ ಭಾರತಿ’ ರವಿ ಹೆಗಡೆಯವರನ್ನು ಸಂಪರ್ಕಿಸಿದಾಗ, “ಈ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಆರೋಪಿಗಳ ಪರ ಅರ್ಜಿ ಸಲ್ಲಿಕೆಯ ಬಗ್ಗೆ ಪ್ರಶ್ನಿಸಿದಾಗ “ನಾನು ಫೋನ್ ನಲ್ಲಿ ಈ ವಿಷಯವನ್ನು ಹೇಳುವುದಿಲ್ಲ. ಹೇಳಿಕೆ ನೀಡಿ ವಿವಾದ ಸೃಷ್ಟಿಸುವುದಿಲ್ಲ” ಎಂದಿದ್ದಾರೆ.

ಕಾನೂನಿನ ಉಲ್ಲಂಘನೆ: ವಕೀಲ ಇಮ್ರಾನ್

“ಮುಸ್ಲಿಮರ ಪರವಾಗಿ ವಕೀಲರು ವಾದ ಮಂಡಿಸಬಾರದೆಂದು ಹೊನ್ನಾವರ ವಕೀಲರ ಸಂಘ ನಿರ್ಧರಿಸಿದ್ದು, ಇದು ಕಾನೂನಿನ ಉಲ್ಲಂಘನೆಯಾಗಿದೆ” ಎಂದು ಭಟ್ಕಳದ ವಕೀಲ ಇಮ್ರಾನ್ ಲಂಕಾ ‘ವಾರ್ತಾ ಭಾರತಿ’ಗೆ ತಿಳಿಸಿದ್ದಾರೆ.

“ಹೊನ್ನಾವರ ವಕೀಲರ ನಡೆಯು ಆರೋಪಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡಿದೆ. ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಾದ ಮಂಡಿಸಲು ಕಾನೂನಿನಲ್ಲಿ ಅವಕಾಶಗಳಿವೆ. ಅದನ್ನು ನಿರಾಕರಿಸುವಂತಿಲ್ಲ. ವಕೀಲರ ನಡೆ ಸರಿಯಲ್ಲ” ಎಂದಿದ್ದಾರೆ.

“ಈ ಬಗ್ಗೆ ನನಗೆ ಆರೋಪಿಯೊಬ್ಬರ ಸಂಬಂಧಿಯೊಬ್ಬರು ವಿಷಯ ತಿಳಿಸಿದಾಗ ನಾನೇ ಸ್ವತಃ ಹೊನ್ನಾವರ ಕೋರ್ಟ್ ಗೆ ತೆರಳಿ ರವಿ ಹೆಗಡೆಯವರೊಂದಿಗೆ ಮಾತುಕತೆ ನಡೆಸಿದ್ದೇನೆ. ಆಗ ರವಿ ಹೆಗಡೆಯವರೇ ನನಗೆ ಮುಸ್ಲಿಮರ ಪರ ವಕಾಲತು ಮಾಡದಂತೆ ವಕೀಲರ ಸಂಘದಲ್ಲಿ ಸಭೆ ನಡೆಸಿರುವುದಾಗಿ ಹೇಳಿದ್ದಾರೆ”.

“ಅಲ್ಲದೆ ರವಿ ಹೆಗಡೆ ಮತ್ತು ನಾನು ಮಾತುಕತೆ ನಡೆಸುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ಇಬ್ಬರು ವಕೀಲರು “ಮುಸ್ಲಿಮರ ಪರ ಯಾರು ಮತ್ತು ಹೇಗೆ ವಾದ ಮಂಡಿಸುತ್ತಾರೆಂಬುದನ್ನು ನೋಡುತ್ತೇವೆ” ಎಂದು ಹೇಳಿರುವುದಾಗಿ ಇಮ್ರಾನ್ ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ವಕೀಲರ ಸಂಘದ ಅಧ್ಯಕ್ಷರು

“ಬಂಧಿತ ಮುಸ್ಲಿಮರ ಪರವಾಗಿ ಯಾರೂ ವಕಾಲತ್ತು ನಡೆಸಬಾರದು ಎಂದು ಸಂಘ ನಿರ್ಧರಿಸಿಲ್ಲ” ಎಂದು ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ ಪ್ರತಿಕ್ರಿಯಿಸಿದ್ದಾರೆ.

“ಆರೋಪಿಗಳ ಪರ ವಕಾಲತ್ತು ವಹಿಸದಂತೆ ಸಂಘಟನೆಯೊಂದು ಮನವಿ ಕೊಟ್ಟಿತ್ತು. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದೇವೆ. ಆದರೆ ಆರೋಪಿಗಳ ಪರವಾಗಿ ವಕಾಲತ್ತು ಮಾಡಬೇಕೋ, ಬೇಡವೋ ಎನ್ನುವುದು ಆಯಾ ವಕೀಲರಿಗೆ ಬಿಟ್ಟದ್ದು” ಎಂದು ಅವರು 'ವಾರ್ತಾ ಭಾರತಿ'ಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News