×
Ad

ಅರಣ್ಯ ಭೂಮಿಯಲ್ಲಿ ಅಕ್ರಮ ಕಾಮಗಾರಿ ಆರೋಪ: 9 ಮಂದಿ ಬಂಧನ, ವಾಹನಗಳ ವಶ

Update: 2017-12-14 20:40 IST

ತರೀಕೆರೆ, ಡಿ.14: ಎಂ.ಸಿ. ಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುಮಾರು 1ಗಂಟೆ ಸಮಯದಲ್ಲಿ ಯಂತ್ರೋಪಕರಣಗಳ ಸಹಾಯದಿಂದ 9 ಮಂದಿ ರೈತರು ನೀಲಗಿರಿ ಜಾತಿಯ ಗಿಡಗಳನ್ನು ಮಟ್ಟಗೊಳಿಸಿ ಭೂ ಪ್ರದೇಶವನ್ನು ಹಸನು ಮಾಡಿದ್ದು, ಸದರಿ ಪ್ರದೇಶದಲ್ಲಿ ಕಂದಕ ಹಾಗೂ ಇಂಗು ಗುಂಡಿಯನ್ನು ನಿರ್ಮಿಸುವ ಮೂಲಕ ಅರಣ್ಯ ಭೂಮಿ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಲಕ್ಕವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಇಟಾಚಿ, ಒಂದು ಟಿಪ್ಪರ್, ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಗ್ರಾಮದ ಗಂಗಾಧರ್, ಅರವಿಂದ, ಏಳುಮಲೈ, ಮಂಜು, ಗಿರೀಶ, ಕುಮಾರ್, ಸುರೇಶ, ಕೃಷ್ಣಮೂರ್ತಿ, ಸುನೀಲ ಎಂದು ಗುರ್ತಿಸಲಾಗಿದೆ.

ಆರೋಪಿಗಳ ಬಂಧನವನ್ನು ಖಂಡಿಸಿದ ಗ್ರಾಮಸ್ಥರು ಹಾಗೂ ವಿವಿಧ ಮುಖಂಡರು ಗುರುವಾರ ಪಟ್ಟಣದ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಿ, ಸಾಗುವಳಿದಾರರು ನ್ಯಾಯಾಲಯದ ಆದೇಶ ಬರುವರೆಗೆ ತಾತ್ಕಾಲಿಕ ಬೆಳೆಯನ್ನು ಬೆಳೆಯಬಹುದು ಹಾಗೂ ಅಧಿಕಾರಿಗಳು ಸಾಗುವಳಿದಾರರಿಗೆ ತೊಂದರೆ ಮಾಡಬಾರದೆಂದು ತೀರ್ಮಾನಿಸಲಾಯಿತು.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ನರೇಂದ್ರ ಸರ್ವೇ ನಂ.4ರಲ್ಲಿನ ಸುಮಾರು 220 ಎಕರೆ ಜಮೀನಿನಲ್ಲಿ ಸುಮಾರು 48 ಕುಟುಂಬಗಳು ಬಹಳ ಹಿಂದಿನಿಂದಲೂ ಉಳುಮೆ ಮಾಡುತ್ತ ಬಂದಿವೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಅರಣ್ಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದರು.

ಟಿ.ಆರ್. ಆನಂದ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯ ಕೆಂಪೇಗೌಡ, ಅರಣ್ಯ ಇಲಾಖೆ ಅಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ, ರವಿಂದ್ರ ಕುಮಾರ್, ಚರಣ್‌ಕುಮಾರ್, ಕಡೂರು ಹಾಗೂ ತಾಲೂಕಿನ ಹಿರಿಯ ಪೋಲಿಸ್ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News