ಬಣಕಲ್ ಸುತ್ತಮುತ್ತ ಮಿತಿಮಿರಿದ ಕಾಡಾನೆ ಹಾವಳಿ

Update: 2017-12-14 16:49 GMT

ಬಿಕ್ಕರಣೆ, ಜಾವಳಿ, ವಸಂತಪುರ, ಸಾರಗೋಡು, ಹೊಸಳ್ಳಿಯಲ್ಲಿ ಬೆಳೆಹಾನಿ

ಬಣಕಲ್, ಡಿ.14: ಬಣಕಲ್ ಸುತ್ತಮುತ್ತ ಕಾಡಾನೆಗಳ ಉಪಟಳ ಮಿತಿಮೀರಿದ್ದು ಬಣಕಲ್‌ನ ಶಾಂತಿನಗರ, ಇಂದಿರಾನಗರದಲ್ಲಿ ಮನೆಗಳ ಬಳಿ ಕಾಡಾನೆಗಳು ಕಾಣಿಸಿಕೊಂಡಿವೆ. ಬಿಕ್ಕರಣೆ, ಜಾವಳಿ, ವಸಂತಪುರ, ಸಾರಗೋಡು ಸುತ್ತಮುತ್ತ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆನಾಶವಾಗಿದೆ.

ಆಲ್ದೂರು ವಲಯದ ಕುಂದೂರು ಅರಣ್ಯ ವ್ಯಾಪ್ತಿಯ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದಾಗಿ ಬಿಕ್ಕರಣೆ ಗ್ರಾಮದ ಪ್ರವೀಣ್, ಸುಬ್ಬರಾಯಗೌಡ ಎಂಬವರಿಗೆ ಸೇರಿದ ಕಾಫಿ, ಅಡಿಕೆ ಗಿಡಗಳನ್ನು ಕಾಡಾನೆಗಳು ತುಳಿದು ಹಾಕಿದ್ದು, ಅಡಿಕೆ ಮರಗಳನ್ನು ಉರುಳಿಸಿ ಸಿಗಿದು ಹಾಕಿವೆ. ಜಾವಳಿಯ ಅಶ್ವಥ್ ಎಂಬವರ ತೋಟದಲ್ಲಿ ದಾಂದಲೆ ನಡೆಸಿದ ಆನೆಗಳು, ಕಾಫಿಗಿಡಗಳನ್ನು ನಜ್ಜುಗುಜ್ಜಾಗಿಸಿವೆ.

 ಬಣಕಲ್ ಇಂದಿರಾನಗರದಲ್ಲಿ ರಾತ್ರಿಸಮಯದಲ್ಲಿ ಕಾಡಾನೆಗಳು ಮನೆಗಳ ಸಮೀಪವೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಹೊರಬರಲು ಭಯಪಡುವಂತಾಗಿದೆ. ಕಳೆದ ವರ್ಷ ಇಂದಿರಾನಗರದ ಸೀನಾ ಎಂಬವರಿಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸಾವಿಗೀಡಾಗಿದ್ದರು. ಪ್ರತಿವರ್ಷ ಈ ಸಮಯದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು ಪುಂಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅರಣ್ಯ ಮತ್ತು ಕೃಷಿ ಪ್ರದೇಶಗಳ ನಡುವೆ ಸೋಲಾರ್ ಬೇಲಿ ಅಥವಾ ಕಾಡಾನೆಗಳು ದಾಟದಂತೆ ನಿರ್ಮಿಸಿರುವ ಹೊಂಡಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಮತ್ತು ಸೂಕ್ಷ್ಮಪ್ರದೇಶದಲ್ಲಿ ಹೊಸದಾಗಿ ಸೋಲಾರ್ ಬೇಲಿ ಮತ್ತು ಕಾಡಾನೆಗಳು ದಾಟದಂತೆ ಹೊಂಡಗಳನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News