ಬೀಜ ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ಮಾಡಿದವರಿಗೆ ಪರಿವರ್ತನಾ ಯಾತ್ರೆ ಮಾಡಲು ನೈತಿಕತೆಯಿದೆಯೇ: ಸಿಎಂ ಸಿದ್ದರಾಮಯ್ಯ

Update: 2017-12-14 17:35 GMT

ಗಂಗಾವತಿ, ಡಿ.14: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ 3 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅಧಿಕಾರಾವಧಿಯಲ್ಲಿ ಜೈಲಿಗೆ ಹೋದ ಮುಖ್ಯಮಂತ್ರಿಗಳೆಂದರೆ ಅದು ಯಡಿಯೂರಪ್ಪ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯಲ್ಲಿ 165ರಲ್ಲಿ 155 ಯೋಜನೆಗಳನ್ನು ಈಡೇರಿಸಿದ್ದೇವೆ. ಅಷ್ಟೇ ಅಲ್ಲದೇ ಇನ್ನೂ ಹಲವಾರು ಹೊಸ ಯೋಜನೆಗಳನ್ನು ರೂಪಿಸಿ ಜನತೆಗೆ ತಲುಪಿಸಿದ್ದೇವೆ. ಅದರಲ್ಲಿ ಮುಖ್ಯವಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಮಾತೃಪೂರ್ಣ ಯೋಜನೆ, ರೈತರ ಸಾಲ ಮನ್ನಾ, ಕೃಷಿ ಉತ್ಪನ್ನಗಳ ಖರೀದಿಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಯೋಜನೆಗಳನ್ನು ಸಮರ್ಪಕವಾಗಿ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ.

ಪ್ರತಾಪ್ ಸಿಂಹ, ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯಲ್ಲಿ ಬೀಜ ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ಮಾಡಿದ್ದರಿಂದ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಇಂತಹವರಿಗೆ ಈಗ ಪರಿವರ್ತನಾ ಯಾತ್ರೆ ಮಾಡಲು ನೈತಿಕತೆಯಿದೆಯೇ?, ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದರು.

ಬಿಜೆಪಿಯ ಆಡಳಿತಾವಧಿಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಾಗಿತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದು ಕೇವಲ ನಮ್ಮ ಆಶ್ವಾಸನೆಯಲ್ಲ. ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಪರಿವರ್ತನೆ ಯಾತ್ರೆ ಮೂಲಕ ಬಿಜೆಪಿಯವರು ಢೋಂಗಿ ಮಾತುಗಳ ಮೂಲಕ ಜನತೆಯನ್ನು ಮರಳು ಮಾಡಲು ಬರುತ್ತಿದ್ದಾರೆ. ಮಂಗಳೂರು, ಶಿರಸಿ, ದಕ್ಷಿಣ ಕನ್ನಡ ಭಾಗದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಅನ್ಸಾರಿ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸುಮಾರು 620 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯವನ್ನು ಸಹಿಸದವರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಪ್ರತಿವರ್ಷದ ಹಂಪಿ ಉತ್ಸವದಂತೆ ಆನೆಗುಂದಿ ಉತ್ಸವ ನಡೆಸಲು ಅನುಕೂಲ ಮಾಡಿಕೊಡಬೇಕು. ಪ್ರತಿ ವರ್ಷ ಉತ್ಸವ ನಡೆಯುವಂತೆ ಅನುದಾನವ್ನನು ಮೀಸಲಿಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕರಾದ ಶಿವರಾಜ ತಂಗಡಗಿ, ಬಾದರ್ಲಿ ಹಂಪನಗೌಡ, ರಾಘವೇಂದ್ರ ಹಿಟ್ನಾಳ, ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರ್ಲೂಟಿ, ಜಿ.ಪಂ ಸದಸ್ಯ ಅಮರೇಶ ಗೋನಾಳ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ನಗರಸಭೆ ಅಧ್ಯಕ್ಷೆ ಸಣ್ಣಹುಲಿಗೆಮ್ಮ ಕಾಮದೊಡ್ಡಿ, ಉಪಾಧ್ಯಕ್ಷ ಕಮ್ಲಿಬಾಬಾ, ದೇವಪ್ಪ ಕಾಮದೊಡ್ಡಿ, ಶಾಮೀದ್ ಮನಿಯಾರ, ಎಸ್.ಬಿ. ಖಾದ್ರಿ, ಮನೋಹರಸ್ವಾಮಿ ಹಿರೇಮಠ, ನಯೋಪ್ರಾ ಅಧ್ಯಕ್ಷ ನಾಗರಾಜ ನಂದಾಪುರ, ರುದ್ರೇಶ ಡ್ಯಾಗಿ, ತಾ.ಪಂ ಅಧ್ಯಕ್ಷ ವಿರೂಪಾಕ್ಷಗೌಡ ಮಾಲಿಪಾಟೀಲ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News