ಕೊಡಗು ಜಿಲ್ಲಾಧಿಕಾರಿಯಾಗಿ ಶ್ರೀವಿದ್ಯಾ ಅಧಿಕಾರ ಸ್ವೀಕಾರ
ಮಡಿಕೇರಿ, ಡಿ.14: ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀವಿದ್ಯಾ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಿರ್ಗಮಿತ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಯ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ, ಕಳೆದ ಒಂದೂವರೆ ವರ್ಷದಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಜಿಲ್ಲೆಯ ಗಿರಿಜನರ ಸಮಸ್ಯೆ, ಕಾನೂನು ಸುವ್ಯವಸ್ಥೆ ನಿರ್ವಹಿಸುವಲ್ಲಿ ಸಫಲರಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಕೆಲಸ ಬಾಕಿ ಇದ್ದು, ಅದನ್ನು ಮುಂದುವರಿಸಲು ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು. ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿ ಜಿಲ್ಲೆಯ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.
ದಿಡ್ಡಳಿ ಗಿರಿಜನರ ವಸತಿಗೆ ಸಂಬಂಧಿಸಿದ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಬಸವನಹಳ್ಳಿ ಬ್ಯಾಡಗುಟ್ಟದಲ್ಲಿ 528 ಕುಟುಂಬಗಳಿಗೆ ವಸತಿ ಕಲ್ಪಿಸಿ ಗಿರಿಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿದ್ದರು ಎಂದು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ ಅವರು ಸ್ಮರಿಸಿದರು. ಇದೇ ಸಂದರ್ಭ ಶ್ರೀವಿದ್ಯಾ ನಿರ್ಗಮಿತ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ನಿರ್ಗಮಿತ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಎಸ್ಪಿ ಪಿ.ರಾಜೇಂದ್ರಪ್ರಸಾದ್,ಎಸಿ ಡಾ.ನಂಜುಂಡೇಗೌಡ, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.