×
Ad

ತುಮಕೂರು ಗ್ರಾಮಾಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ

Update: 2017-12-14 23:34 IST

ತುಮಕೂರು, ಡಿ.14: ಸರಕಾರಿ ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ಎನ್.ನರಸಿಂಹಮೂರ್ತಿ ಸೂಚನೆ ನೀಡಿದ್ದಾರೆ.

ನಗರದ ತಾಪಂ ಸಭಾಂಗಣದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆಯ, ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಜನಸಾಮಾನ್ಯರಿಗೆ ನೀಡುವ ಸವಲತ್ತುಗಳನ್ನು ತಲುಪಿಸುವಲ್ಲಿ ವಿಳಂಬವಾಗ ಬಾರದು. ಕೆಲವು ಇಲಾಖೆಗಳಲ್ಲಿ ಶೇ.60 ಪ್ರಗತಿ ಮಾತ್ರ ಸಾಧಿಸಲಾಗಿದೆ. ಪ್ರಸ್ತುತ ಅರ್ಥಿಕ ವರ್ಷದ ಅಂತ್ಯದೊಳಗೆ ಶೇ .100 ಪ್ರಗತಿ ಸಾಧಿಸುವಂತೆ ತಾಕೀತು ಮಾಡಿದರು.

ಸಭೆಗೆ ಮಾಹಿತಿ ನೀಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ, 2016-17ನೇ ಸಾಲಿನಲ್ಲಿ ತಾಲೂಕಿನ 6 ಹೋಬಳಿಗಳಲ್ಲಿ ಒಟ್ಟು 700 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗೆ ಅಗತ್ಯವಿರುವ ಎಲ್ಲ ಸಲಕರಣೆ ವಿತರಿಸಲಾಗಿದೆ. ಪ್ರಸ್ತುತ ರಾಗಿ ಕಟಾವು ನಡೆಯುತ್ತಿದ್ದು, ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಸರಕಾರವೇ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುತ್ತಿದೆ. ಈ ಸಾಲಿನಲ್ಲಿ 1,000 ಹೆಕ್ಟೇರ್‌ನಲ್ಲಿ ರಾಗಿ ಕಟಾವು ಯಂತ್ರ ಬಳಕೆಯ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ಪಶುಸಂಗೋಪನಾ ಯೋಜನೆಯ ಪಶು ಭಾಗ್ಯ ಯೋಜನೆಯಡಿ 2016-17ನೇ ಸಾಲಿನಲ್ಲಿ ತುಮಕೂರು ತಾಲೂಕಿಗೆ 168 ಗುರಿ ನೀಡಿದ್ದು, ಇದುವರೆಗೂ ಬ್ಯಾಂಕುಗಳ ಸಹಕಾರದೊಂದಿಗೆ 154 ಫಲಾನುಭವಿಗಳಿಗೆ ಹಸುಗಳನ್ನು ಕೊಳ್ಳಲು ಸಾಲ ನೀಡಲಾಗಿದೆ. 9 ಕೇಸುಗಳು ಬಾಕಿ ಇವೆ. 2017-18ನೇ ಸಾಲಿನಲ್ಲಿ 146 ಗುರಿ ನೀಡಿದ್ದು, ಡಿಸೆಂಬರ್ ಅಂತ್ಯದೊಳಗೆ ಫಲಾನುಭವಿಗಳಿಗೆ ಬ್ಯಾಂಕ್‌ಗಳ ಮೂಲಕ ಸೌಲಭ್ಯ ಒದಗಿಸಲಾಗುವುದು ಎಂದು ಪಶುವೈದ್ಯಾಧಿಕಾರಿ ಡಾ.ಸಂಜೀವರಾಯ ತಿಳಿಸಿದರು. ರೇಷ್ಮೆ, ಅಕ್ಷರ ದಾಸೋಹ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ,ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಸಭೆಗೆ ಇದುವರೆಗಿನ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸದಸ್ಯರಾದ ರಾಜೇಗೌಡ, ವೈ.ಎಚ್.ಹುಚ್ಚಯ್ಯ, ತಾಪಂ ಅಧ್ಯಕ್ಷ ಗಂಗಾಂಜನೇಯ, ಇಒ ಡಾ.ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News